ನಾಯಕರು ಫೋನಲ್ಲಲ್ಲ, ಖುದ್ದು ಬಂದು ಚರ್ಚಿಸಲಿ

| Published : Mar 24 2024, 01:31 AM IST

ಸಾರಾಂಶ

ದಾವಣಗೆರೆ ಬಿಜೆಪಿ ಬಂಡಾಯದ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಫೋನ್ ಮಾಡಿದರೆ ಆಗುವುದಿಲ್ಲ. ಭೇಟಿಯಾಗಿ ಚರ್ಚೆ ಮಾಡಲಿ. ಯಾವುದೇ ದೋಷವಾಗದಂತೆ ಮುಖಾಮುಖಿ ಚರ್ಚೆಯಾಗಿ, ತೀರ್ಮಾನ ಆಗಬೇಕು ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಬಿಜೆಪಿ ಬಂಡಾಯದ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಫೋನ್ ಮಾಡಿದರೆ ಆಗುವುದಿಲ್ಲ. ಭೇಟಿಯಾಗಿ ಚರ್ಚೆ ಮಾಡಲಿ. ಯಾವುದೇ ದೋಷವಾಗದಂತೆ ಮುಖಾಮುಖಿ ಚರ್ಚೆಯಾಗಿ, ತೀರ್ಮಾನ ಆಗಬೇಕು ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಹೇಳಿದರು.

ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪರಿಸ್ಥಿತಿಯನ್ನೂ ನಾಯಕರು ಕೇಳಬೇಕು ಎಂಬ ಪಟ್ಟು ನಮ್ಮದು. ಏ.19ರಂದು ಕಡೆಯ ಕ್ಷಣದವರೆಗೂ ಕಾದು ನೋಡುತ್ತೇವೆ. ನಾವು ಅರ್ಜಿ ಹಾಕಲು ಕಡೆಯ ಕ್ಷಣದವರೆಗೂ ಅವಕಾಶವಂತೂ ಇದ್ದೇ ಇದೆ ಎಂದು ತಿಳಿಸಿದರು.

ನಮ್ಮ ಪಕ್ಷ ಬಿಜೆಪಿಯನ್ನು ಒಡೆಯುವ ಆಸೆ ನಮಗ್ಯಾರಿಗೂ ಇಲ್ಲ. ಪಕ್ಷದ ನಾಯಕರು ಬಂದು ಮಾತನಾಡಿದರೆ ಸರಿ. ನಾಯಕರು ಬಂದು, ದುಡ್ಡು ಇದ್ದವರ ಪರ ಮಾತನಾಡಿ ಹೋಗುತ್ತಾರೆ. ನಮ್ಮ ಪರ ಮಾತನಾಡುತ್ತಾರಾ ಅಂತಾ ಕಾದುನೋಡುತ್ತೇವೆ. ಆನಂತರ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಕೆ, ಇತರೆ ವಿಚಾರ. ಈಗಾಗಲೇ ಎಲ್ಲ ಸಿದ್ಧತೆಯೂ ಆಗಿವೆ ಎಂದು ಸೂಚ್ಯವಾಗಿ ಸುಳಿವು ನೀಡಿದರು.

2-3 ತಿಂಗಳ ಹಿಂದೆ ಪಕ್ಷಕ್ಕೆ ಬಂದವರಿಗೆಲ್ಲಾ ಉನ್ನತ ಸ್ಥಾನಮಾನ ನೀಡಿದ್ದಾರೆ. ಬಿಜೆಪಿಯಲ್ಲಿ ಹಿರಿಯರ ಕಡೆಗಣನೆ ಆಗುತ್ತಿದೆ. ಈಚೆಗಷ್ಟೇ ಬಂದವರು ವೇದಿಕೆ ಮೇಲೆ ಕುಳಿತುಕೊಳ್ಳಬೇಕು. ಐದು ದಶಕದಿಂದ ಪಕ್ಷವನ್ನು ಕಟ್ಟಿದವರೆಲ್ಲಾ ನೆಲದ ಮೇಲೆ ಕುಳಿತುಕೊಳ್ಳಬೇಕು. ಹಿರಿಯರು, ಹಿರಿಯ ಮುಖಂಡರ ಬಳಿ ಒಂದು ಮಾತು ಕೇಳುವ ಸೌಜನ್ಯವೂ ಇಲ್ಲ. ಇಂತಹ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರು ಕೇಳಿದರೆ ನಾವು ಏನು ಹೇಳಬೇಕು ಎಂದು ರವೀಂದ್ರನಾಥ ಅಸಮಾಧಾನ ಹೊರಹಾಕಿದರು.

- - - ಬಾಕ್ಸ್‌ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ತೋರಿಸಿ: ಶಿವಗಂಗಾಗೆ ಟಾಂಗ್‌- ನಮಗಿಂತಲೂ ಕಾಂಗ್ರೆಸ್ಸಿನವರ ಮನೆ ಜಾಸ್ತಿ ಒಡೆದಿದೆ ಎಂದು ವ್ಯಂಗ್ಯ ದಾವಣಗೆರೆ: "ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾವು 6 ಸಲ ಗೆದ್ದು, ಒಂದು ಸಲ ಮಾತ್ರ ಸೋತಿದ್ದೇವೆ. ಬರೀ ಬುರುಡೇ ಬಿಡುವುದಲ್ಲ. ಮೊದಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಲಿ.. "

ಹೀಗೆಂದು ಬಿಜೆಪಿಯ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಸವಾಲಿಗೆ ಟಾಂಗ್ ನೀಡಿದರು. ಚನ್ನಗಿರಿ ಶಾಸಕ ಬಸವರಾಜ ಮೊದಲು ಕಾಂಗ್ರೆಸ್ ಅಭ್ಯರ್ಥಿಯನ್ನು ದಾವಣಗೆರೆ ಕ್ಷೇತ್ರದಲ್ಲಿ ಈಗ ಗೆಲ್ಲಿಸಿ, ತೋರಿಸಬೇಕು. ನಾವು ಗೆಲ್ಲಿಸಿ, ತೋರಿಸುವುದಲ್ಲ ಎಂದರು.

ಕಾಂಗ್ರೆಸ್ಸಿನವರ ಮನೆ ನಮಗಿಂತಲೂ ಜಾಸ್ತಿ ಒಡೆದಿದೆ. ಮೊದಲು ನಿಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ತೋರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಬಿಜೆಪಿ ರೆಬಲ್ ಟೀಂಗೆ ಶಿವಗಂಗಾ ಬಸವರಾಜ ಸವಾಲು ಹಾಕಿದ್ದರ ಹಿನ್ನೆಲೆ ರವೀಂದ್ರನಾಥ್‌ ಈ ರೀತಿ ತಿರುಗೇಟು ನೀಡಿದರು.

- - - ಬಾಕ್ಸ್‌-2ಶಿವಮೊಗ್ಗದಲ್ಲಿ ಈಶ್ವರಪ್ಪ ಗೆಲ್ಲುತ್ತಾರೆ ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಬಹಳ ವರ್ಷದ ಸ್ನೇಹಿತರಾದ ಕೆ.ಎಸ್.ಈಶ್ವರಪ್ಪ ಗೆಲ್ಲುವ ವಾತಾವರಣವಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಬ್ಯಾಟ್ ಬೀಸಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ಈಶ್ವರಪ್ಪ ನಿವಾಸಕ್ಕೆ ಆರೋಗ್ಯ ವಿಚಾರಿಸಲು ಹೋಗಿದ್ದೆವು. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪನವರೇ ಗೆಲ್ಲುವ ವಾತಾವರಣ ಇದೆ ಎಂದರು.

ಈಶ್ವರಪ್ಪ ಅವರನ್ನು ಅಲ್ಲಿ ಕಾರ್ಯಕರ್ತರು, ಜನರು ಹೋರಾಟ ಮಾಡಿ, ಗೆಲ್ಲಿಸಲಿದ್ದಾರೆ. ಈಶ್ವರಪ್ಪ ಆರೋಗ್ಯ ವಿಚಾರಿಸಿ, ನಾನು ಹಾಗೂ ಜಗಳೂರು ಮಾಜಿ ಶಾಸಕ ಡಿ.ಜಿ.ಗುರುಸಿದ್ದನಗೌಡ ಶುಭಾರೈಸಿ ಬಂದಿದ್ದೇವೆ ಎಂದು ತಿಳಿಸಿದರು.

- - - ಟಾಪ್‌ ಕೋಟ್‌ ದಾವಣಗೆರೆ ಲೋಕಸಭಾ ಕ್ಷೇತ್ರದ ಇಬ್ಬರೂ ಹೆಣ್ಣುಮಕ್ಕಳು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಹೋಗಿ, ದರ್ಶನ ಪಡೆದು ಬಂದಿದ್ದಾರೆ. ನಮ್ಮಲ್ಲಿ ಯಾವುದೇ ಜಿದ್ದು ಇಲ್ಲ, ಏನೂ ಇಲ್ಲ. ಚುನಾವಣೆ ಚಟುವಟಿಕೆಗಳು ಇನ್ನೂ ಚಾಲನೆಯಾಗಿಲ್ಲ, ಅಷ್ಟೇ.

- ಎಸ್.ಎ.ರವೀಂದ್ರನಾಥ, ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ

- - - -23ಕೆಡಿವಿಜಿ3: ಎಸ್.ಎ.ರವೀಂದ್ರನಾಥ