ಸಮಾಜಮುಖಿ ಕಾರ್ಯಕ್ಕೆ ಮನುಷ್ಯ ಅಣಿಯಾಗಲಿ: ಮಹಾದೇವ ಸ್ವಾಮೀಜಿ

| Published : Jun 17 2024, 01:35 AM IST

ಸಾರಾಂಶ

ಮನುಷ್ಯ ಜೀವನದಲ್ಲಿ ಸಮಾಜುಮುಖಿ ಕಾರ್ಯಕ್ಕೆ ಅಣಿಯಾಗಬೇಕು.

ಯಡಿಯಾಪೂರದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದಿಂದ 11 ಜೋಡಿ ಸಾಮೂಹಿಕ ವಿವಾಹ

ಕನ್ನಡಪ್ರಭ ವಾರ್ತೆ ಕುಕನೂರು

ಮನುಷ್ಯ ಜೀವನದಲ್ಲಿ ಸಮಾಜುಮುಖಿ ಕಾರ್ಯಕ್ಕೆ ಅಣಿಯಾಗಬೇಕು ಎಂದು ಕುಕನೂರಿನ ಶ್ರೀ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ಯಡಿಯಾಪೂರ ಗ್ರಾಮದಲ್ಲಿ ಶ್ರೀ ರಾಮುಲು ಅಭಿಮಾನಿ ಬಳಗದಿಂದ ಗ್ರಾಮದ ಯುವಕ ಪರಶುರಾಮ ಸಿದ್ದಪ್ಪ ಮ್ಯಾಗೇರಿ ಆಯೋಜಿಸಿದ್ದ 8ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಡಿಯಾಪೂರ ಗ್ರಾಮ ಶ್ರೀ ಸಿದ್ದಲಿಂಗೇಶ್ವರ ದೇವರ ಸಾನಿಧ್ಯವಾಗಿದೆ. ಇಲ್ಲಿ ನಂಬಿ ಬಂದ ಭಕ್ತರಿಗೆ ಸಿದ್ದಲಿಂಗೇಶ್ವರ ದೇವರು ಸಕಲವನ್ನು ಕರುಣಿಸಿದ್ದಾನೆ. ಗ್ರಾಮದ ಪರಶುರಾಮ ಸಿದ್ದಪ್ಪಮ್ಯಾಗೇರಿ ಎಂಬ ಯುವಕ ಕಳೆದ ಎಂಟು ವರ್ಷದಿಂದ ಗ್ರಾಮದಲ್ಲಿ ಶ್ರೀರಾಮುಲು ಅಭಿಮಾನಿ ಬಳಗ ಕಟ್ಟಿಕೊಂಡು ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿದ್ದಾರೆ. ಜಮೀನಿನಲ್ಲಿ ಹತ್ತಿ ಸೀಡ್ಸ್, ಮೆಣಸಿನ ಸೀಡ್ಸ್ ಮಾಡಿಕೊಂಡು ಬಂದ ಲಾಭದಲ್ಲಿ ಮದುವೆಗೆ ಹಣ ಹಾಕಿ ಮದುವೆ ಕಾರ್ಯ ಮಾಡುತ್ತಿದ್ದಾನೆ. ಇದು ನಿಜಕ್ಕೂ ಮಾದರಿ ಕಾರ್ಯ. ಕೃಷಿಯಲ್ಲಿ ಬಂದಂತಹ ಹಣವನ್ನು ಸಮಾಜಮುಖಿ ಕಾರ್ಯಕ್ಕೆ ವಿನಿಯೋಗ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮನುಷ್ಯ ಜೀವನದಲ್ಲಿ ಒಂದಿಲ್ಲ ಒಂದು ಸಮಾಜಮುಖಿ ಕಾರ್ಯದಲ್ಲಿ ಬೆರೆಯಬೇಕು. ಪ್ರತಿ ವ್ಯಕ್ತಿ ತನ್ನನ್ನು ತಾನು ಸಮಾಜಕ್ಕೆ ಅರ್ಪಣೆ ಮಾಡಿಕೊಂಡಾಗ ಜೀವನ ಸಾರ್ಥಕ ಆಗುತ್ತದೆ. ಮನುಷ್ಯ ಜನ್ಮ ತಾಳಿರುವುದು ಪರೋಪಕಾರಕ್ಕಾಗಿ. ತಾನು ಬದುಕಿ, ಮತ್ತೊಬ್ಬರ ಬದುಕಿಗೂ ಆಸರೆ ಆಗಬೇಕು ಎಂಬುದು ಬದುಕಿನ ಧ್ಯೇಯ ಎಂದರು.ಮದುವೆಯಾದ ದಂಪತಿಗಳು ಜೀವನದಲ್ಲಿ ಬರುವ ನೋವುಗಳನ್ನು ಸಮವಾಗಿ ಸ್ವೀಕರಿಸಿ ಬದುಕು ಎದುರಿಸಬೇಕು. ಸುಖ ಬಾಳು ಕಷ್ಟದ ಕರಿನೆರಳು ದಾಟಿದ ಮೇಲೆ ಬಂದೇ ಬರುತ್ತದೆ. ಗಂಡನ ದುಡಿಮೆಗೆ ಪ್ರೋತ್ಸಾಹದಾಯವಾಗಿ ಹೆಂಡತಿ ಹೆಜ್ಜೆ ಹಾಕಬೇಕು. ಹೆಂಡತಿಗೆ ನೋವಾಗದಂತೆ ಗಂಡ ನಡೆದುಕೊಳ್ಳಬಾರದು. ಹೆತ್ತ ತಂದೆ-ತಾಯಿ ತರಹ ಅತ್ತೆ ಮಾವರನ್ನು ಜೋಪಾನ ಮಾಡುವ ಕರ್ತವ್ಯ ಸೊಸೆಯದ್ದಾಗಿರುತ್ತದೆ. ಮನೆಗೆ ಬಂದ ಸೊಸೆಯನ್ನು ಮಗಳಂತೆ ಕಾಣುವ ಜವಾಬ್ದಾರಿ ಸಹ ಅತ್ತೆ ಮಾವರದ್ದಾಗಿರುತ್ತದೆ ಎಂದು ಮಹಾದೇವ ಸ್ವಾಮೀಜಿ ಸಲಹೆ ನೀಡಿದರು.

ರಾಜ್ಯ ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೊಟ್ರಪ್ಪ ತೋಟದ, ಸುಧಾಕರ ದೇಸಾಯಿ, ಹರೀಶ್ವರ ಯಡಿಯಾಪೂರ, ವೀರಯ್ಯ ಹಿರೇಮಠ ಮಲ್ಲಯ್ಯ ಕಕ್ಕಿಹಳ್ಳಿ, ರಾಮಣ್ಣ ಹೊಸಮನಿ, ಮಂಜುನಾಥ ಶಿರೂರು, ಮಲ್ಲಪ್ಪ ಬಂಗಾರಿ, ಗುದ್ನೇಪ್ಪ ಕೇಂಭಾವಿಮಠ, ಶ್ರೀರಾಮುಲು ಅಭಿಮಾನಿ ಬಳಗದ ಪರಶುರಾಮ ಸಿದ್ದಪ್ಪಮ್ಯಾಗೇರಿ ಇತರರಿದ್ದರು.