ಬಸವಾದಿ ಶಿವಶರಣರ ಸಂದೇಶಗಳು ಬದುಕಿನ ನಡೆ ನುಡಿಗಳಾಲಿ

| Published : Feb 04 2025, 12:33 AM IST

ಸಾರಾಂಶ

ಮೇಲು ಕೀಳಿಲ್ಲದ ಬಸವಾದಿ ಶಿವಶರಣರ ಮೌಲ್ಯಯುತ ಜೀವನ ವಿಧಾನ ಮಾನವೀಯ ಮೌಲ್ಯಗಳನ್ನು ಆಧರಿಸಿದ್ದು, ಅಲ್ಲಿನ ಸಂದೇಶಗಳು ಇಡೀ ಮಾನವನ ಬದುಕಿನ ಸತ್ಯ, ನಡೆ ನುಡಿಗಳಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಮೇಲು ಕೀಳಿಲ್ಲದ ಬಸವಾದಿ ಶಿವಶರಣರ ಮೌಲ್ಯಯುತ ಜೀವನ ವಿಧಾನ ಮಾನವೀಯ ಮೌಲ್ಯಗಳನ್ನು ಆಧರಿಸಿದ್ದು, ಅಲ್ಲಿನ ಸಂದೇಶಗಳು ಇಡೀ ಮಾನವನ ಬದುಕಿನ ಸತ್ಯ, ನಡೆ ನುಡಿಗಳಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಸೋಮವಾರ ಹಾನಗಲ್ಲಿನ ಗಂಗಾ ಪರಮೇಶ್ವರಿ ಸಭಾಭವನದಲ್ಲಿ ನಡೆದ ನಿಜ ಶರಣ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕಾಗಿಯೇ ಬದುಕಿದ ಶರಣರ ವಚನ ಸಂದೇಶಗಳು ಇಂದಿನ ಯುವ ಪೀಳಿಗೆಗೆ ತಲುಪಬೇಕು. ಅಂಬಿಗರು ಸದ್ದಿಲ್ಲದೆ ಸಮಾಜ ಸೇವೆ ಮಾಡಿದವರು. ನಂಬಿದವರನ್ನು ಕೈಬಿಡುವವರಲ್ಲ. ಯಾರಿಗೂ ತೊಂದರೆ ಕೊಡುವವರಲ್ಲ. ಇಂತಹ ಅಂಬಿಗ ಸಮುದಾಯ ನಿರ್ಮಿಸುತ್ತಿರುವ ಹಾನಗಲ್ಲಿನ ಗಂಗಾ ಪರಮೇಶ್ವರಿ ಸಭಾಭವನ ನಿರ್ಮಾಣಕ್ಕೆ ಶಾಸಕರ ನಿಧಿಯಲ್ಲಿ ೧೦ ಲಕ್ಷ ರು. ನೀಡುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಇದು ಸ್ವಾರ್ಥದ ಕಾಲ. ಆದರೆ ೧೨ನೇ ಶತಮಾನದಲ್ಲಿ ೧.೯೨ ಲಕ್ಷ ಶಿವಶರಣರು ಬಸವಣ್ಣನವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಸೇವೆ ಮಾಡಿದರು. ಎಲ್ಲರೂ ಈಗ ಸಮಾಜಮುಖಿ ಚಿಂತನೆ ನಡೆಸಬೇಕಾಗಿದೆ. ಭಾರತದ ಇತಿಹಾಸ ನಾವೆಲ್ಲ ತಿಳಿಯೋಣ. ಭಾರತ ಬದುಕಿದರೆ ಮಾತ್ರ ಇಡೀ ಜಗತ್ತು ಬದುಕಬಲ್ಲದು. ಎಲ್ಲರಿಗೂ ಆಶ್ರಯ ನೀಡಿದ ತಾಯಿ ಭಾರತ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಮಹಾತ್ಮರು ತಮಗೋಸ್ಕರ ಅಲ್ಲ ಸಮಾಜಕ್ಕಾಗಿ ಬದುಕಿದವರು. ನಾವೆಲ್ಲ ನಮ್ಮ ಸಮುದಾಯದ ಹಿತದ ಜೊತೆಗೆ ದೇಶದ ಹಿತವನ್ನೂ ಕಾಯೋಣ. ಹಾನಗಲ್ಲಿನ ಗಂಗಾ ಪರಮೇಶ್ವರಿ ಸಭಾಭವನ ನಿರ್ಮಾಣಕ್ಕೆ ೨೦ ಲಕ್ಷ ರು. ನೀಡುವುದಾಗಿ ತಿಳಿಸಿದರು.ಮಾಜಿ ಸಚಿವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜ ಮುಖ್ಯ ಅತಿಥಿಯಾಗಿ ಮಾತನಾಡಿ, ನಿಷ್ಠುರವಾಗಿ ಸಮಾಜಮುಖಿ ಸಂದೇಶ ನೀಡಿದ ಅಂಬಿಗರ ಚೌಡಯ್ಯನವರ ವಚನಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಈಗ ರಾಜಕೀಯ, ಧಾರ್ಮಿಕ, ಸಾಮಾಜಿಕ ಸ್ಥಾನ ಮಾನಗಳು ಅಂಬಿಗ ಸಮಾಜಕ್ಕೆ ದೊರಕಬೇಕಾಗಿದೆ. ಕಲ್ಯಾಣ ಕ್ರಾಂತಿಯ ರೀತಿಯಲ್ಲಿ ನಮ್ಮ ಸಮಾಜವೂ ಕೂಡ ಕ್ರಾಂತಿಕಾರಕವಾಗಿ ಮುನ್ನಡೆಯಬೇಕಾಗಿದೆ. ನಮ್ಮ ಸಂಘಟನೆ ದುರ್ಬಲಗೊಳ್ಳುವುದು ಬೇಡ. ಒಂದಾಗಿ ಬದುಕೋಣ ಎಂದರು.ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಪ್ರದೀಪ ಶೇಷಗಿರಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಸಮಾಜ ಸೇವಕ ಸಿದ್ದಲಿಂಗಪ್ಪ ಕಮಡೊಳ್ಳಿ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಪುರಸಭಾ ಅಧ್ಯಕ್ಷ ಪರಶುರಾಮ ಖಂಡೂನವರ, ಗುರು ಮತ್ತೂರ, ಗುಡ್ಡಪ್ಪ ತಿಪ್ಪಿಗುಂಡಿ, ಸಂಜಯ ಸುಣಗಾರ, ವೀಣಾ ಗುಡಿ, ಮಮತಾ ಆರೆಗೊಪ್ಪ, ರವಿಕುಮಾರ ಬಂಗೇರ ನಾರಾಯಣಪ್ಪ ಕಠಾರಿ, ಎಸ್.ಆನಂದ, ಮಂಜುನಾಥ ಭೋವಿ, ರಾಜೇಂದ್ರ ಬಾರ್ಕಿ, ನಾಗೇಂದ್ರ ತುಮರಿಕೊಪ್ಪ, ಅನಂತವಿಕಾಸ ನಿಂಗೋಜಿ, ಎಸ್‌ಎಫ್.ಕಠಾರಿ, ಅಣ್ಣಪ್ಪ ಚಾಕಾಪುರ, ಗಂಗಮ್ಮ ನಿಂಗೋಜಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.