ಸಾರಾಂಶ
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು
ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕನಕಗಿರಿಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿಜಯಕುಮಾರ ಹೇಳಿದರು.
ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸ.ಪ್ರ.ದ. ಕಾಲೇಜಿನಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿ ಸಹಯೋಗದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಾಧಾರದ ಕೊರತೆ ಇದ್ದಲ್ಲಿ ತಿರ್ಮಾನ ಕೈಗೊಳ್ಳಲು ವಿಳಂಬವಾಗುತ್ತದೆ. ಯಾರ ಆಮಿಷಕ್ಕೂ ಒಳಗಾಗದಂತೆ ಜಾಗೃತರಾಗಿ ಕಾರ್ಯನಿರ್ವಹಿಸುವುದು ಸುರಕ್ಷಿತ ಮಾರ್ಗವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ಕಾರ್ಯ ಮಾಡಿಸಿಕೊಳ್ಳುವುದಕ್ಕೆ ಹಣದ ಆಮಿಷ ಒಡ್ಡುವುದು ಸಹಜ. ಭ್ರಷ್ಟಾಚಾರ ಮೊದಲು ಉತ್ತಮ ಎನಿಸಿದರೂ ಕೊನೆಗೆ ಅದು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ನಾಗರತ್ನ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದ್ದು, ಭ್ರಷ್ಟಾಚಾರ ಅಪರಾಧ ಎಂಬುದು ಮನವರಿಕೆ ಮಾಡಿಕೊಳ್ಳಬೇಕು. ಸಮಾಜದ ಹಿತದೃಷ್ಟಿ, ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ನೌಕರರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ಸೇವೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಸರ್ಕಾರದ ನಿಯಮಗಳನ್ವಯ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಭ್ರಷ್ಟಾಚಾರ ಜ್ವಲಂತ ಸಮಸ್ಯೆ ಪ್ರತಿಯೊಬ್ಬ ಅಧಿಕಾರಿ ಜನಸೇವಕ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪ್ರಾಧ್ಯಾಪಕ ಡಾ. ವೀರೇಶ, ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಸೋಮಶೇಖರಪ್ಪ, ದೇವೇಂದ್ರಪ್ಪ, ಮಾರುತೇಶ, ಮಂಜುನಾಥ, ಮಾದಿನಾಳಪ್ಪ, ಲಕ್ಷ್ಮೀ ಇದ್ದರು.