ಕಲ್ಪತರು ವಿದ್ಯಾಸಂಸ್ಥೆ ಸಂಸ್ಥಾಪಕ ಪ್ರಾಂಶುಪಾಲರಾದ ದಿ. ಜೆ.ಆರ್.ಮಹಾಲಿಂಗಯ್ಯನವರಿಗೆ ಮುಂದಿನ ವರ್ಷ ೧೦೦ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರ ನೆನಪನ್ನು ವರ್ಷಪೂರ್ತಿ ನೆನಪಿಸಿಕೊಳ್ಳುವ ಸಾರ್ಥಕವಾಗುವಂತಹ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ತಿಪಟೂರು

ಕಲ್ಪತರು ವಿದ್ಯಾಸಂಸ್ಥೆ ಸಂಸ್ಥಾಪಕ ಪ್ರಾಂಶುಪಾಲರಾದ ದಿ. ಜೆ.ಆರ್.ಮಹಾಲಿಂಗಯ್ಯನವರಿಗೆ ಮುಂದಿನ ವರ್ಷ ೧೦೦ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರ ನೆನಪನ್ನು ವರ್ಷಪೂರ್ತಿ ನೆನಪಿಸಿಕೊಳ್ಳುವ ಸಾರ್ಥಕವಾಗುವಂತಹ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಪ್ರೊ.ಜೆ.ಆರ್. ಮಹಾಲಿಂಗಯ್ಯನವರ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಜನರಿಗೆ ಮುಂದಿನ ೧೦೦ ವರ್ಷಗಳ ತಲೆಮಾರಿಗೆ ಇವರ ಆದರ್ಶಗಳು, ಶೈಕ್ಷಣಿಕ ಸಾಧನೆಗಳು ತಲುಪಲು ಕಾರ್ಯಕ್ರಮಗಳ ಆಯೋಜನೆ ಮಾಡಬೇಕು. ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಮಾರ್ಗದರ್ಶನವನ್ನು ನೀಡಲು ನಾನು ಸದಾಸಿದ್ಧ ಎಂದು ತಿಳಿಸಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕೆ.ಆರ್. ಬಸವರಾಜು ಮಾತನಾಡಿ, ಕಲ್ಪತರು ಕಾಲೇಜಿನ ಬೆಳವಣಿಗೆಯಲ್ಲಿ ಸಂಸ್ಥಾಪಕ ಪ್ರಾಂಶುಪಾಲರಾಗಿ ಪ್ರೊ. ಜೆ.ಆರ್. ಮಹಾಲಿಂಗಯ್ಯನವರು ವಹಿಸಿದ ಪಾತ್ರವನ್ನು ಸ್ಮರಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಿವರಾಜು ಮಾತನಾಡುತ್ತ, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಪ್ರೊ. ಜೆ.ಆರ್. ಮಹಾಲಿಂಗಯ್ಯನವರ ಸ್ಮರಣೆ ಇಂದಿನ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣಾಸಕ್ತರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಕಲ್ಪತರು ವಿದ್ಯಾಸಂಸ್ಥೆಯ ಮಾಜಿ ಉಪಾಧ್ಯಕ್ಷ ಸಂಗಮೇಶ್, ಜೆ.ಆರ್.ಮಹಾಲಿಂಗಯ್ಯನವರ ಜನ್ಮಶತಮಾನೋತ್ಸವದ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ಮಾಜಿ ಖಜಾಂಚಿ ಶಿವಪ್ರಸಾದ್ ಮಾತನಾಡಿ, ವಿದ್ಯಾಸಂಸ್ಥೆಯನ್ನು ಕಟ್ಟಿ ಲಕ್ಷಾಂತರ ಜನರಿಗೆ ವಿದ್ಯಾದಾನ ನೀಡುವಲ್ಲಿ ಜೆ.ಆರ್. ಮಹಾಲಿಂಗಯ್ಯನವರ ಪಾತ್ರ ಹಿರಿದು. ಇಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಪ್ರಾಶುಪಾಲರಾದ ಪ್ರೊ.ವಿಜಯಕುಮಾರಿ.ಟಿ.ಆರ್, ಮಾತನಾಡಿ, ಸಂಸ್ಥೆ ಆಡಳಿತಾತ್ಮಕ ವ್ಯವಸ್ಥೆಯ ಹೊರಗೆ ಒಂದು ಟ್ರಸ್ಟ್ ನಿರ್ಮಿಸಿ ಅದರ ಅಡಿಯಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಶಿಷ್ಯ ವೇತನ ನೀಡುವುದರ ಮೂಲಕ ಜೆ.ಆರ್.ಎಂ ಅವರ ಹೆಸರನ್ನೂ ಶಾಶ್ವತವಾಗಿ ಸ್ಮರಿಸುವಂತಹ ಕೆಲಸವಾಗಬೇಕೆಂದು ಎಂಬ ಸಲಹೆಯನ್ನು ನೀಡಿದರು.

ಕಲ್ಪತರು ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಮಾಜಿ ಸದಸ್ಯರು, ಸಂಸ್ಥೆ ಎಲ್ಲಾ ಸದಸ್ಯರು, ಕಲ್ಪತರು ವಿದ್ಯಾಸಂಸ್ಥೆ ಸಂಸ್ಥಾಪಕ ಪ್ರಾಚಾರ್ಯರಾದ ಪ್ರೊ.ಜೆ.ಆರ್.ಮಹಾಲಿಂಗಯ್ಯನವರ ಪುತ್ರ ಮಹೇಶ್, ಕಲ್ಪತರು ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕ ವರ್ಗ, ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕ ವರ್ಗ, ಅಧ್ಯಾಪಕೇತರ ವರ್ಗ, ಕಲ್ಪತರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.