ಸಾರಾಂಶ
ಆಟೋ ಚಾಲಕರು- ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ । ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಲು ಸದಾ ಬದ್ಧ
ಕನ್ನಡಪ್ರಭ ವಾರ್ತೆ, ಬೀರೂರುನಾಡಿನ ನೆಲ, ಜಲ, ಭಾಷೆ ಸಂರಕ್ಷಣೆ ವಿಷಯದಲ್ಲಿ ಮೇರು ನಟ ಡಾ.ರಾಜಕುಮಾರ್ ನಂತರ ಉಂಟಾದ ನಾಯಕತ್ವದ ಕೊರತೆ ತುಂಬುವಲ್ಲಿ ಹಲವು ಕನ್ನಡಪರ ಸಂಘಟನೆಗಳು ಮತ್ತು ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳು ಶ್ರಮಿಸುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ರಂಗಮಂದಿರದ ವೇದಿಕೆಯಲ್ಲಿ ರಾತ್ರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಏರ್ಪಡಿಸಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಆಚರಿಸುವುದನ್ನು ಹೊರತು ಪಡಿಸಿದರೆ, ಪ್ರತಿ ವರ್ಷ ತಪ್ಪದೆ ರಾಜ್ಯೋತ್ಸವ ಆಚರಿಸು ವವರು ಆಟೋ ಚಾಲಕರು. ಇಂತವರನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ವೃತ್ತಿ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯ.ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಎಲ್ಲಾ ಭಾಷೆ ಕಲಿಯಬೇಕಿದೆ. ಬದುಕಲಿಕ್ಕೆ ಎಲ್ಲಾ ಭಾಷೆ ಅಗತ್ಯ. ಆದರೆ ಅಭಿಮಾನ ಮತ್ತು ಪ್ರೀತಿ ಮಾತ್ರ ಕನ್ನಡ ಭಾಷೆ ಮೇಲಿರಲಿ. ಕನ್ನಡವನ್ನು ರಕ್ಷಿಸಿ, ಪೋಷಿಸೋಣ ನಿಮ್ಮ ಬೇಡಿಕೆಗಳನ್ನು ಆದಷ್ಟು ಬೇಗಾ ಪೂರೈಸುತ್ತೇನೆ. ಬಹಳ ದಿನಗಳ ಬೇಡಿಕೆಯಾದ ಆಟೋ ಸಂಘಕ್ಕೆ ನಿವೇಶನವನ್ನು ಕೊಡುವ ಭರವಸೆ ನೀಡಿದರು.
ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಕಟ್ಟುವಲ್ಲಿ ಗ್ರಾಮೀಣ ಜನರು ಅದರಲ್ಲಿಯೂ ಆಟೊ ಚಾಲಕರಂತಹ ಕಟ್ಟಾಳುಗಳು ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಇಂತಹ ಕಾರ್ಯಕ್ರಮಗಳು ಭಾಷೆ ಸಮೃದ್ಧವಾಗಿಸುವಲ್ಲಿ ನೆರವಾಗಿವೆ. ನಮ್ಮ ಕೀಳರಿಮೆಯಿಂದ ನಾಡಿನ ಶ್ರೀಮಂತಿಕೆ ನಶಿಸಿದೆ. ನಾವೆಲ್ಲ ನಮ್ಮ ಸಂಸ್ಕೃತಿ ಉಳಿಸುವಲ್ಲಿ ಕಾರ್ಯನಿರತರಾಗಬೇಕಿದ್ದು, ಆಟೋ ಚಾಲಕರು ಕನ್ನಡ ಕಾಳಜಿಯ ಜೊತೆಗೆ ನಿಮ್ಮ ಕುಟುಂಬಗಳನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆಯುವಂತೆ ಮಾಡಲು ಎಚ್ಚರ ವಹಿಸುವ ಜೊತೆಗೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಯುವ ನಾಯಕ ಚೇತನ್ ಕೆಂಪರಾಜು ಮಾತನಾಡಿ, ಕನ್ನಡ ಭಾಷೆ, ನೆಲದ ವಿಷಯವಾಗಿ ಎನಾದರೂ ಅವಮಾನವಾದರೆ ಮೊದಲು ಧ್ವನಿ ಎತ್ತುವವರು ಆಟೋ ಚಾಲಕರು. ಭಾಷೆಯನ್ನು ಉಳಿಸಿ ಬೆಳೆಸುವವರು ಆಟೋ ಚಾಲಕರು ಸಾರ್ವಜನಿಕರು ಇಂತಹವರನ್ನು ಗೌರವಿಸೋಣ ಎಂದರು.
ಅಜ್ಜಂಪುರ ಕಾಲೇಜು ಉಪನ್ಯಾಸಕ ಡಾ.ಆನಂದ್ ಕನ್ನಡ ನಾಡು ನುಡಿ ಭಾಷೆ ಉದಯವಾದ ಬಗ್ಗೆ ಉಪನ್ಯಾಸ ನೀಡಿದರು.ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಕಡೂರು ಪುರಸಭೆ ಸದಸ್ಯ ಮೋಹನ್ ಕುಮಾರ್, ಕರವೇ ಮುಖಂಡ ರುದ್ರೇಗೌಡ, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಾಳಿಹಳ್ಳಿಯ ಮಾಜಿ ಸೈನಿಕ ಎಂ.ನರಸಿಂಹಮೂರ್ತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಗಿರೀಶ್, ಸರ್ಕಾರಿ ಆಸ್ಪತ್ರೆ ಶೂಶ್ರೂಷಕಿ ವಳ್ಳಿ, ಮತ್ತು ಪುರಸಭೆ ಪೌರಕಾರ್ಮಿಕರಾದ ಕೊಂಗನಾಟರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಸಂಘದ ಅಧ್ಯಕ್ಷ ಬಿ.ಎಚ್.ಶ್ರೀನಿವಾಸ್ ವಹಿಸಿದ್ದರು. ವೃತ್ತ ನಿರೀಕ್ಷಕ ಶ್ರೀಕಾಂತ್, ಅಡಿಕೆ ವರ್ತಕ ಚಂದ್ರಣ್ಣ, ಗಾರೆ ಗುತ್ತಿಗೆದಾರ ಪ್ರಕಾಶ್, ಪುರಸಭೆ ಸದಸ್ಯ ಮಾನಿಕ್ ಭಾಷ, ಎಸ್.ಸೋಮಪ್ಪ, ಉಪಾಧ್ಯಕ್ಷ ಆರ್,ನಾಗೇಶ್, ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್, ಎಸ್.ಚೇತನ್, ಶಂಕರ್, ಬಾಬು, ಮುರಳಿ, ಶಿವಕುಮಾರ್, ಸೇರಿದಂತೆ ಆಟೋ ಸಂಘದ ಪದಾಧಿಕಾರಿಗಳು ಇದ್ದರು.
ನಗಿಸುವ ಜೊತೆ ವಿಶೇಷ ಸಂದೇಶ:ಕಾರ್ಯಕ್ರಮಕ್ಕೆ ಮೆರಗು ನೀಡುವಂತೆ ಕಾಮಿಡಿ ಕಿಲಾಡಿ ಹೆಸರು ವಾಸಿಯಾದ ಅಪ್ಪಣ್ಣ, ಮಿಂಚು, ಹಾಗೂ ಪ್ರವೀಣ್ ನೆರೆದಿದ್ದ ಸಾರ್ವಜನಿಕರಿಗೆ ಹಾಸ್ಯದ ಮೂಲಕ ಕನ್ನಡ ನಾಡು ನುಡಿ ಸಂರಕ್ಷಣೆ ಹಾಗೂ ಜವಾಬ್ದಾರಿಗಳ ಬಗ್ಗೆ ಪ್ರದರ್ಶನ ನೀಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
30 ಬೀರೂರು 1ಬೀರೂರಿನ ಸಂಗೊಳ್ಳಿರಾಯಣ್ಣ ವೇದಿಕೆಯಲ್ಲಿ ಗುರುವಾರ ಆಟೋ ಚಾಲಕರು ಮತ್ತು ಮಾಲೀಕರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಸಂಘದ ಅಧ್ಯಕ್ಷ ಬಿ.ಎಚ್.ಶ್ರೀನಿವಾಸ್, ಭಂಡಾರಿ ಶ್ರೀನಿವಾಸ್, ಬಿ.ಕೆ.ಶಶಿಧರ್ ಸೇರಿದಂತೆ ಮತ್ತಿತರರು ಇದ್ದರು.
30 ಬೀರೂರು 2ಆಟೋ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಎನ್.ಗಿರೀಶ್, ಮಾಜಿ ಸೈನಿಕ ನರಸಿಂಹ ಮೂರ್ತಿ, ಶೂಶ್ರಷಕಿ ವಳ್ಳಿ, ಪೌರಕಾರ್ಮಿಕ ಕೊಂಗನಾಟರನ್ನು ಶಾಸಕ ಕೆ.ಎಸ್.ಆನಂದ್, ಅಧ್ಯಕ್ಷ ಬಿ.ಎಚ್.ಶ್ರೀನಿವಾಸ್ ಸೇರಿದಂತೆ ಮತ್ತಿತರ ಗಣ್ಯರು ಸನ್ಮಾನಿಸಿ ಗೌರವಿಸಿದರು.