ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶದ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಪಂಚಾಯತ್ ರಾಜ್ ಇಲಾಖೆಯು ಕೆಲಸ ನಿರ್ವಹಿಸುತ್ತಿದೆ. ಪಾರದರ್ಶಕವಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ನಡೆಯುತ್ತಾ, ಜನರ ಅಗತ್ಯ ಸೌಕರ್ಯ ಒದಗಿಸುವಲ್ಲಿ ಪಂಚಾಯತ್ ರಾಜ್ ಇಲಾಖೆ ಮಾದರಿ ಕೆಲಸ ಮಾಡುತ್ತಿವೆ ಎಂದು ಜಿಪಂ ಸಿಇಒ ಡಾ. ವಾಸಂತಿ ಅಮರ್ ಹೇಳಿದರು
ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶದ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಪಂಚಾಯತ್ ರಾಜ್ ಇಲಾಖೆಯು ಕೆಲಸ ನಿರ್ವಹಿಸುತ್ತಿದೆ. ಪಾರದರ್ಶಕವಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ನಡೆಯುತ್ತಾ, ಜನರ ಅಗತ್ಯ ಸೌಕರ್ಯ ಒದಗಿಸುವಲ್ಲಿ ಪಂಚಾಯತ್ ರಾಜ್ ಇಲಾಖೆ ಮಾದರಿ ಕೆಲಸ ಮಾಡುತ್ತಿವೆ ಎಂದು ಜಿಪಂ ಸಿಇಒ ಡಾ. ವಾಸಂತಿ ಅಮರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಪಂ ಸಭಾಂಗಣದಲ್ಲಿ ಜಿಪಂ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಗ್ರಾಮೀಣಾಭಿವೃದ್ಧಿ ಜವಾಬ್ದಾರಿಯಿದೆ. ಅಧಿಕಾರಿಗಳು ಸಾಮಾಜಿಕ ಬದಲಾವಣೆಗಾಗಿ ನನ್ನ ಕೆಲಸ ಎಂದು ಮನೋಭಾವನೆ ಬೆಳೆಸಿಕೊಳ್ಳಬೇಕು. ರಾಜ್ಯ ಮಟ್ಟಕ್ಕೆ ಜಿಲ್ಲೆಯ ಹೆಸರು ಕೊಂಡೊಯ್ಯಲು ಶ್ರಮಿಸಬೇಕಿದೆ ಎಂದರು.ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ತನ್ನದೇ ಇತಿಹಾಸವಿದ್ದು, ರಾಜ ಮನೆತನ ಕಾಲದಿಂದಲೂ ಸುಧೀರ್ಘವಾಗಿ ಗ್ರಾಮಗಳು ಹಾಗೂ ಪಂಚಾಯಿತಿಯ ವ್ಯವಸ್ಥೆ ವಿಕೇಂದ್ರೀಕರಣದೊಂದಿಗೆ ಸಾಗುತ್ತ ಬಂದಿದೆ. ಸ್ವಾತಂತ್ಯ್ರ ಭಾರತದ ನಂತರದಲ್ಲಿ ಬಲವಂತ ರಾಯ್ ಮೆಹ್ತಾ ಶಿಫಾರಸ್ಸು ಮತ್ತು ಎಲ್ ಎಂ ಸಿಂಘ್ವಿ ಶಿಫಾರಸ್ಸು ಅನ್ವಯ ಭಾರತ ಸಂವಿಧಾನದ 73ನೇ ತಿದ್ದುಪಡಿ ಮೂಲಕ 1993 ರಲ್ಲಿ ಎಪ್ರಿಲ್ 24 ರಂದು ಭಾರತದ ರಾಷ್ಟ್ರಪತಿ ಅವರ ಅಂಕಿತ ಹಾಕುವ ಮೂಲಕ ಜಾರಿಗೆ ಬಂದಿದ್ದು, ಈ ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನ ಸ್ಮರಿಸುವುದಕ್ಕಾಗಿ ಹಾಗೂ ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಸ್ಥಳೀಯ ಆಡಳಿತವನ್ನು ಬಲಗೊಳಿಸುವ ನಮ್ಮ ಬದ್ಧತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸಲು ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಮ ಪಂಚಾಯ್ತಿ ಇನ್ನಷ್ಟು ಸದೃಢ ಆಗಬೇಕು ಹಾಗೂ ಗಾಂಧೀಜಿ ಕಂಡ ಕನಸ್ಸು ನನಸು ಆಗಬೇಕು ಎಂದರೆ ಹಳ್ಳಿಗಳ ಅಭಿವೃದ್ಧಿಗೆ ನಾವೆಲ್ಲ ಪಣ ತೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ತೆರಿಗೆ ವಸೂಲಾತಿಯಲ್ಲಿ ಸಾಧನೆ: ಪುರಸ್ಕಾರ
2025-26ನೇ ಸಾಲಿನ ಜಿಲ್ಲೆಯಲ್ಲಿ ಹೊಸಕೋಟೆ ತಾಲೂನ ಪಂಚಾಯಿತಿಗಳಿಂದ ಅತಿ ಹೆಚ್ಚು ತೆರಿಗೆ ವಸೂಲಾತಿಯಾಗಿದ್ದು, ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಪ್ರಶಸ್ತಿ ಪಡೆದಿದೆ. ಇನ್ನೂ ತಾಲೂಕುವಾರು ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ದೇವನಹಳ್ಳಿ ತಾಲೂಕಿನ ಕೋರಮಂಗಲ ಗ್ರಾಪಂ, ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಪಂ, ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಪಂ, ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಪಂಗಳಿಗೆ ಬಹುಮಾನ ವಿತರಿಸಲಾಯಿತು.ಜಿಲ್ಲೆಯಲ್ಲಿ ಅರಿವು ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿರುವ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಅರಿವು ಕೇಂದ್ರ ಪ್ರಶಸ್ತಿ, ಅತ್ಯುತ್ತಮ ಮಹಿಳಾ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಗೊಳಿಸಿರುವ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾ ಅಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್, ತಾಪಂ ಇಒಗಳು, ಗ್ರಾಪಂ ಪಿಡಿಒಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.26ಕೆಡಿಬಿಪಿ2- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್‌ರಾಜ್ ದಿನಾಚರಣೆಯಲ್ಲಿ ಮಾದರಿ ಗ್ರಾಮ ಪಂಚಾಯಿತಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.