ವಾಲ್ಮೀಕಿ ಜಯಂತಿ ಆಚರಣೆಯೊಂದಿಗೆ ವಾಲ್ಮೀಕಿ ರಾಮಾಯಣದಲ್ಲಿನ ಮಾನವೀಯತೆ ಮೌಲ್ಯ, ಸಹೋದರತ್ವ, ಸ್ವಾಮಿ ನಿಷ್ಠೆ ಇವೆಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಮಾತ್ರ ಜಯಂತಿ ಆಚರಣೆಗೆ ಮತ್ತಷ್ಟು ಮೆರುಗು ಬರುತ್ತದೆ
ಕೊಟ್ಟೂರು: ಬದುಕಿನಲ್ಲಿ ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟ ಬೇಡರ ರತ್ನಾಕರ ತಪಸ್ಸು ಮಾಡಿ ವಾಲ್ಮೀಕಿ ಮಹರ್ಷಿಯಾದ ನಡೆ ಪ್ರತಿಯೊಬ್ಬರಿಗೂ ಆದರ್ಶ ಪ್ರಾಯ ಎಂದು ಕಾಂಗ್ರೆಸ್ ಮುಖಂಡ ಸಾವಜ್ಜಿ ರಾಜೇಂದ್ರ ಪ್ರಸಾದ್ ಹೇಳಿದರು.
ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಾಲ್ಮೀಕಿ ಜಯಂತಿ ಆಚರಣೆಯೊಂದಿಗೆ ವಾಲ್ಮೀಕಿ ರಾಮಾಯಣದಲ್ಲಿನ ಮಾನವೀಯತೆ ಮೌಲ್ಯ, ಸಹೋದರತ್ವ, ಸ್ವಾಮಿ ನಿಷ್ಠೆ ಇವೆಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಮಾತ್ರ ಜಯಂತಿ ಆಚರಣೆಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಹೇಳಿದರು.ನಿವೃತ್ತ ಡಿ.ಡಿ.ಪಿ.ಐ ಕೊಟ್ರೇಶ ಮಾತನಾಡಿ ನಾಗರಕಟ್ಟೆ ಗ್ರಾಮದಲ್ಲಿನ ಹನುಮ್ಮ ಎಂಬ ಮಹಿಳೆ ಆರಂಭಿಸಿದ ಶಾಲೆ ಸಾವಿತ್ರಿಬಾಯಿ ಫುಲೆಯವರ ಹೋಲಿಕೆಯನ್ನು ನೆನಪು ಮಾಡುತ್ತೆ ಎಂದು ಹೇಳಿ ಹಿಂದಿನ ಕಾಲದಲ್ಲಿ ಹಿರಿಯರು ಶಿಕ್ಷಣ ಕಲಿಕೆಗೆ ಯಾವ ಬಗೆಯ ಪ್ರೇರಣೆ ನೀಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಐ.ಎ.ಎಸ್. ಮತ್ತು ಐ.ಪಿ.ಎಸ್. ಮಾದರಿಯಲ್ಲಿ ಶ್ಯಾನುಭೋಗಿ ಕರ್ತವ್ಯ ನಿರ್ವಹಣೆ, ಸರ್ವೆ ಮಾಡುವುದು, ಲೆಕ್ಕ ಪತ್ರ ದಾಖಲಿಸುವುದು ಎನ್ನುವುದನ್ನೇ ಹಿಂದಿನ ಕಾಲದಲ್ಲಿ ನಾಗರಕಟ್ಟೆ ಗ್ರಾಮದಲ್ಲಿ ಮಾಡುತ್ತಿದ್ದರು ಎನ್ನುವುದು ಹೆಮ್ಮೆಯ ವಿಷಯ ಎಂದರು.ಪತ್ರಕರ್ತ ಉಜ್ಜಯಿನಿ ರುದ್ರಪ್ಪ ಮಾತನಾಡಿ ವಾಲ್ಮೀಕಿ ಜಯಂತಿ ಈ ವೇಳೆಯಲ್ಲಿ ರಾಮಾಯಣ, ಪಾರಾಯಣ ನಡೆಸಬೇಕು ಅಂದಾಗ ಮಾತ್ರ ಆ ಮಹಾನ್ ಕಾವ್ಯದ ಶ್ರೇಷ್ಠತೆ ಹೆಚ್ಚಾಗುತ್ತದೆ ಎಂದರಲ್ಲದೆ ಅಂಬೇಡ್ಕರ್ ಧಾರವಾಹಿ ಪ್ರಸಾರವಾದಂತೆ ರಾಜ್ಯದ ಪಾಳೆಗಾರರ ಜೀವನ ಚರಿತ್ರೆ ಮತ್ತು ಹೋರಾಟ ಕುರಿತು ಧಾರವಾಹಿ ಮತ್ತು ಚಲನ ಚಿತ್ರಗಳು ಬರಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯರುಗಳಾದ ಬಿ.ಮಾರುತಿ, ಸಿದ್ದಲಿಂಗಪ್ಪ ಮತ್ತಿತರರು ಇದ್ದರು.
ನಿವೃತ್ತ ಶಿಕ್ಷಕ ವೃಷಭೇಂದ್ರ ಸ್ವಾಮಿ, ಡಾ.ಕಮಲ, ಎಸ್.ಮಂಜುನಾಥ, ಸಿದ್ದಲಿಂಗಪ್ಪ, ಇಮಾಮ್ ಸಾಹೇಬ್, ಗುರುಪಾದಯ್ಯ ಮಾತನಾಡಿದರು. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ವೃಷಬೇಂದ್ರಯ್ಯ, ಪತ್ರಕರ್ತ ಉಜ್ಜಿನಿ ರುದ್ರಪ್ಪ, ನಿವೃತ್ತ ಡಿ.ಡಿ.ಪಿ.ಎ ಕೊಟ್ರೇಶ, ಡಾ.ಕಮಲ ರನ್ನು ಸನ್ಮಾನಿಸಲಾಯಿತು.ಗ್ರಾ.ಪಂ. ಮಾಜಿ ಸದಸ್ಯ ಮುಖಂಡ ದಯಾನಂದ, ಪ್ರಸ್ತಾವಿಕವಾಗಿ ಮಾತನಾಡಿದರು.