ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದನ್ನು ಅಧಿಕಾರಿಗಳು ಸರಿಯಾಗಿ ತಲುಪಿಸಬೇಕೇ ವಿನಃ ದುರುಪಯೋಗ ಆಗಬಾರದು. ಇದೇ ರೀತಿ ಮುಂದುವರೆದರೆ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೊತದಾರ ತಿಳಿಸಿದರು.ತಾಲೂಕಿನ ಮರಗೂರ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನಗೊಂಡು ಸಿಬ್ಬಂದಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ವಸತಿ ಶಾಲೆಯ ಅಡುಗೆ ಕೋಣೆ ಪರಿಶೀಲಿಸಿ, ಮಕ್ಕಳ ಸಮಸ್ಯೆ ಆಲಿಸಿದರು. ವಿದ್ಯಾರ್ಥಿಗಳ ಜೊತೆಗೆ ಕುಳಿತು ಊಟ ಮಾಡಿ ಅಡುಗೆ ಗುಣಮಟ್ಟ ಪರಿಶೀಲಿಸಿದರು. ಜಿಲ್ಲೆಯಲ್ಲಿಯೇ ಕಾಲೇಜು ಹೊಂದಿರುವ ಅತೀ ದೊಡ್ಡ ಶಾಲೆ ಇದಾಗಿದ್ದು, ಇಲ್ಲಿನ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತರಗತಿಯ ಆಯಾ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಒಳ್ಳೆಯ ಬೋಧನೆ ನೀಡುವ ಕಡೆ ಗಮನ ಹರಿಸಬೇಕು. ಯಾರು ಸರಿಯಾಗಿ ವಿಷಯ ಬೋಧನೆ ಮಾಡುವುದಿಲ್ಲ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನೇಕ ಪೋಷಕರು ಶಿಕ್ಷಣದ ಬೋಧನೆ, ಅವ್ಯವಸ್ಥೆಯ ಬಗ್ಗೆ ದೂರುಗಳಿವೆ. ವಸತಿ ನಿಲಯದ ಊಟದ ಕೋಣೆ ಸ್ವಚ್ಛತೆ, ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕು. ವಿದ್ಯಾರ್ಥಿಗಳ ಆರೋಗ್ಯ ಕಡೆ ಗಮನಹರಿಸಬೇಕು. ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.ಈ ಶಾಲೆಯ ವಿಶಾಲವಾದ ಮೈದಾನ, ಒಳ್ಳೆಯ ಪರಿಸರ ಆರೋಗ್ಯಕರವಾದ ವಾತಾವರಣ ಇದೆ. ಆದರೆ ಅದನ್ನು ಇಲ್ಲಿನ ಸಿಬ್ಬಂದಿ ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು. ಏಕೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವಿರಿ ಎಂದು ಸಿಬ್ಬಂದಿ, ಶಿಕ್ಷಕರಿಗೆ ಪ್ರಶ್ನಿಸಿದರು. ಗುಟ್ಕಾ, ತಂಬಾಕು ಸೇವನೆ ಶಾಲಾ ಆವರಣದಲ್ಲಿ ನಿಷೇಧವಿದೆ. ಸೇವನೆ ಕಂಡು ಬಂದರೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ವಹಿಸಲಾಗುವುದು. ಏನೇ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತರಬೇಕು. ನಾನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಾಕೀತು ಮಾಡಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಪ್ರಾಂಶುಪಾಲೆ ಕರುಣಾಮಯಿ ಧೂಮವಾಡ, ನಿಲಯಪಾಲಕಿ ಪುಷ್ಪಾ ನಾಯಕ ಸೇರಿದಂತೆ ಶಾಲಾ ಸಿಬ್ಬಂದಿ, ಶಿಕ್ಷಕರು ಉಪಸ್ಥಿತರಿದ್ದರು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ
ವಸತಿ ಶಾಲೆ ಪ್ರಾರಂಭದಿಂದ ಇಲ್ಲಿಯವರೆಗೆ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಆಗಾಗ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ, ಆದ್ದರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೊತದಾರ ಬಳಿ ಮನವಿ ಮಾಡಿದರು.ಈಗಾಗಲೇ ವಸತಿ ಶಾಲೆಯ ಸುಣ್ಣ ಬಣ್ಣ ಕಾಮಗಾರಿ ಪ್ರಗತಿಯಲ್ಲಿದೆ. ಶೌಚಾಲಯ, ಸ್ನಾನ ಗೃಹ, ವಿದ್ಯುತ್ ಸಂಪರ್ಕ ದುರಸ್ತಿ, ಗಾದಿ (ಹಾಸಿಗೆ), ಬಾಗಿಲು, ಕಿಟಕಿ, ಸಿ.ಸಿ.ಕ್ಯಾಮೆರಾ ಮತ್ತು ಶುದ್ಧಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಕ್ರಮ ವಹಿಸಲಾಗುವುದು. ಮುಂದಿನ ದಿನದಲ್ಲಿ ಈ ಶಾಲೆ ಮಾದರಿ ಶಾಲೆಗೆ ಕ್ರಮ ವಹಿಸಲಾಗುವುದು. ಮಹೇಶ ಪೋತದಾರ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ವಿಜಯಪುರ