ಗದಗ: ಜ್ಞಾನವೇ ಸಮಾಜದ ಪ್ರಗತಿಯ ಮೂಲವಾಗಿದ್ದು, ಮನೆ ಮನೆಗೂ ಅರಿವಿನ ಬೆಳಕು ತಲುಪಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೊಳ್ಳುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.ರಾಜ್ಯ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ವಿ. ಬಳ್ಳಾರಿ ಅವರ ಅಭಿನವ ನಗರದಲ್ಲಿನ ನಿವಾಸದಲ್ಲಿ ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇದು ಮೂರನೇ ಕಾರ್ಯಕ್ರಮವಾಗಿದ್ದು, ಮೂರನೇ ಗ್ರಂಥಾಲಯ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ- ಸಿದ್ಧಾಂತಗಳು ನಮ್ಮೆಲ್ಲರಿಗೂ ದಾರಿದೀಪವಾಗಬೇಕು. ಎರಡು ರುಪಾಯಿ ಗಳಿಸಿದರೆ, ಒಂದು ಬದುಕಿಗೆ, ಮತ್ತೊಂದು ಪುಸ್ತಕ ಖರೀದಿಗೆ ಬಳಸಬೇಕು ಎಂಬ ಮಾತು ಜ್ಞಾನ ಸಂಪಾದನೆಯ ಅಗತ್ಯತೆಯನ್ನು ಸಾರುತ್ತದೆ. ಇದು ಸಮಾಜದಲ್ಲಿ ಪಾಲನೆಯಾಗಬೇಕು ಎಂದರು.ಬಸವಣ್ಣನವರು ಭಕ್ತಿ ಹಾಗೂ ಅರಿವಿನ ನಡುವಿನ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸಿದ್ದು, ಅಜ್ಞಾನ ಹಾಗೂ ಭಯದ ಭಕ್ತಿ ಬೇಡವೆಂದು ಹೇಳಿದರು. ಲಿಂಗದ ಮೂಲಕ ದೇವರು ನಮ್ಮೊಳಗೇ ಇದ್ದಾನೆ ಎಂಬ ಅರಿವನ್ನು ಮೂಡಿಸಿ, ವಚನಗಳ ಮೂಲಕ ಜ್ಞಾನ ಸಂಗ್ರಹಿಸಿಕೊಳ್ಳಲು ಪ್ರೇರೇಪಿಸಿದರು ಎಂದರು.ಹಿಂದೆ ಸಂಸ್ಕೃತ ಆಡಳಿತ ಭಾಷೆಯಾಗಿದ್ದ ಕಾರಣ ವಾಲ್ಮಿಕಿ ಹಾಗೂ ಬುದ್ಧರಂಥ ಮಹಾನ್ ವ್ಯಕ್ತಿಗಳು ಬೆಳಕಿಗೆ ಬಂದರು. ಈಗ ಪರಿಸ್ಥಿತಿ ಬದಲಾಗಿದ್ದು, ಮನಸ್ಥಿತಿಯೂ ಬದಲಾಗಬೇಕು. ಈ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಅವಶ್ಯಕ ಎಂದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ರವಿ ಗುಂಜೀಕರ ಮಾತನಾಡಿ, ಜ್ಞಾನದ ವಿಸ್ತರಣೆ ಮತ್ತು ವೈಚಾರಿಕ ಬೆಳವಣಿಗೆಗೆ ಗ್ರಂಥಗಳು ಪೂರಕವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ನಾವು ಮನೆಯಲ್ಲಿ ದೇವರಿಗಾಗಿ ಪ್ರತ್ಯೇಕವಾಗಿ ಹೇಗೆ ದೇವರ ಕೋಣೆಯನ್ನು ಮೀಸಲಿಡುತ್ತೇವೆಯೋ, ಹಾಗೆಯೇ ಮನೆಯಲ್ಲಿ ಐದೋ ಹತ್ತೋ ಪುಸ್ತಕಗಳನ್ನಿಟ್ಟುಕೊಂಡು ಒಂದು ಪುಟ್ಟ ಗ್ರಂಥಾಲಯ ಮಾಡಿಕೊಳ್ಳಬೇಕು. ಅದು ನಮ್ಮ ಪಾಲಿನ ಜ್ಞಾನದ ದೇವಾಲಯವಾಗಲಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿಯೂ ಸಣ್ಣದೊಂದು ಗ್ರಂಥಾಲಯವಿದ್ದರೆ ಆ ಮನೆಯಲ್ಲಿ ಜ್ಞಾನದ ದೀಪ ಬೆಳಗಲು ಸಾಧ್ಯ. ಪುಸ್ತಕ ಓದುವ ಹವ್ಯಾಸ ಕೇವಲ ವ್ಯಕ್ತಿಯ ಬೆಳವಣಿಗೆಯಲ್ಲದೆ, ಸಮಾಜದ ಪ್ರಗತಿಗೂ ಪೂರಕ ಎಂದರು.ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ, ಸಂಚಾಲಕ ಸಂತೋಷ ಅಂಗಡಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಮಾನಸ, ಡಾ. ರವಿ ಗುಂಜೀಕರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರನ್ನು ಸನ್ಮಾನಿಸಲಾಯಿತು.ಸಂಚಾಲಕ ಎ.ಎಸ್. ಮಕಾಂದಾರ, ಜಾನಪದ ಸಾಹಿತ್ಯ ಪರಿಷತ್ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಕೆ.ಎಫ್. ಹಳ್ಯಾಳ, ಎಚ್.ಎಂ. ಶರೀಫನವರ, ಅಶೋಕ ಬರಗುಂಡಿ, ಮುತ್ತು ಬಳಿಯಲಿ, ನಿವೃತ್ತ ಶಿಕ್ಷಕ ಕೆ.ಎಫ್. ಬಳ್ಳಾರಿ, ಜಿಪಂ ಮಾಜಿ ಕೋಶಾಧ್ಯಕ್ಷ ಆರ್.ಎಂ. ನಿಂಬನಾಯ್ಕರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ, ಎಂ.ಎಂ. ನಿಟ್ಟಾಲಿ, ಸಿದ್ದಪ್ಪ ಲಿಂಗದಾಳ, ಲಕ್ಷಣರೆಡ್ಡಿ ಮುದಗಣ್ಣವರ, ರಾಜು ಕಂತಿಗೊಣ್ಣವರ, ರಾಜಕುಮಾರ ಸೊಪಡ್ಲ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಇದ್ದರು.