ಸಾರಾಂಶ
ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮ ತಮ್ಮ ಹುಟ್ಟುಹಬ್ಬಗಳನ್ನು ಮೋಜು ಮಸ್ತಿ ನಡೆಸಿ ಕೇಕ್ ಕಟ್ ಮಾಡಿ, ಸಮಯ ಕಳೆಯುವ ಬದಲು ಅದೇ ದುಡಿದ ಹಣವನ್ನು ಸಮಾಜ ಸೇವೆಗೆ ಸಮರ್ಪಿಸುವ ಮೂಲಕ ಮಾದರಿಯಾಗಿ ಹುಟ್ಟುಹಬ್ಬಗಳನ್ನು ಆಚರಿಸುವುದು ಹೆಚ್ಚಾಗಬೇಕಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಯುವಕರಲ್ಲಿ ಸಮಾಜಮುಖಿಯಾಗಿ ಸೇವಾ ಸಮರ್ಪಣೆ ಮೂಲಕ ಹುಟ್ಟುಹಬ್ಬ ಆಚರಿಸುವುದು ಹೆಚ್ಚಾಗಬೇಕು ಎಂದು ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಹೇಳಿದರು.ನಗರದ ಕುವೆಂಪುನಗರ ಕೆ.ಇ.ಬಿ.ಬಡಾವಣೆಯಲ್ಲಿರುವ ಪಿ.ರವಿಕುಮಾರ್‌ಗೌಡ ಜನಸ್ನೇಹಿ ಕೇಂದ್ರ ಆವರಣದಲ್ಲಿ ನಗರಸಭಾ ಮಾಜಿ ಸದಸ್ಯ ಡಿ.ಮಂಜುನಾಥ್ ಅವರ ಹಿತೈಷಿಗಳು ಮತ್ತು ಸ್ನೇಹ ಬಳಗ ಆಯೋಜಿಸಿದ್ದ ನಗರಸಭಾ ಮಾಜಿ ಸದಸ್ಯ ಡಿ.ಮಂಜುನಾಥ್ ಹುಟ್ಟುಹಬ್ಬ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣೆ, ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ವಯೋವೃದ್ಧರಿಗೆ ವಾಕ್‌ಸ್ಟಿಕ್ ವಿತರಣೆ-ರಕ್ತದಾನ-ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮ ತಮ್ಮ ಹುಟ್ಟುಹಬ್ಬಗಳನ್ನು ಮೋಜು ಮಸ್ತಿ ನಡೆಸಿ ಕೇಕ್ ಕಟ್ ಮಾಡಿ, ಸಮಯ ಕಳೆಯುವ ಬದಲು ಅದೇ ದುಡಿದ ಹಣವನ್ನು ಸಮಾಜ ಸೇವೆಗೆ ಸಮರ್ಪಿಸುವ ಮೂಲಕ ಮಾದರಿಯಾಗಿ ಹುಟ್ಟುಹಬ್ಬಗಳನ್ನು ಆಚರಿಸುವುದು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರ ಇಲ್ಲದೆ ಡಿ.ಮಂಜುನಾಥ್ ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ನುಡಿದರು.ಅಧಿಕಾರ ಇರುವವರು ಮತ್ತು ಶ್ರೀಮಂತರು ಸಮಾಜ ಸೇವೆ ಮಾಡಲ್ಲ, ಅಧಿಕಾರ ಇಲ್ಲದೆ ಸಮಾಜ ಸೇವೆ, ಸಮಾಜ ಮುಖಿಯಾಗಿ ನಿಲ್ಲುವುದು ದೊಡ್ಡ ಸಾಧನೆಯಾಗುತ್ತದೆ. ಈ ಭಾಗದ ಮಹಿಳೆಯರು, ವಿಕಲಚೇತನರು, ಅನಾರೋಗ್ಯಸ್ಥರಿಗೆ ನೆರವಾಗುವ ಮೂಲಕ ಆರೋಗ್ಯ ತಪಾಸಣೆ, ಶಾಲಾ ಬ್ಯಾಗ್, ವಯೋವೃದ್ಧರಿಗೆ ವಾಕ್‌ಸ್ಟಿಕ್, ಮಹಿಳೆಯರಿಗೆ ಬಾಗಿನ, ಪೌರಕಾರ್ಮಿಕರಿಗೆ ಸಮವಸ್ತ್ರ ಅನ್ನಸಂತರ್ಪಣೆ ಮಾಡುವುದು ದೊಡ್ಡ ಸಾಧನೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಮಂಜುನಾಥ್ ಅವರ ಹಿತೈಷಿಗಳು ಮತ್ತು ಸ್ನೇಹ ಬಳಗದ ರಾಜೇಶ್, ಮನೋಜ್, ಅಜಯ್, ರಾಘು, ನರೇಂದ್ರ, ಸಂತೋಷ್, ಸಂದೀಪ್, ಸತೀಶ್ ಮತ್ತಿತರರಿದ್ದರು.