ಸಾರಾಂಶ
- ಕ್ವಿಟ್ ಇಂಡಿಯಾ ಚಳುವಳಿ ನೆನಪು । ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಸೇವಾದಳ-ರಾಷ್ಟ್ರಧ್ವಜ ಮಾಹಿತಿ ಶಿಬಿರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ಕೇವಲ ಕಲಿಕೆಗಷ್ಟೇ ಸೀಮಿತವಾಗದೆ ಸಮಾಜದಲ್ಲಿ ಸೇವೆ ಸಲ್ಲಿಸುವ ಬಗ್ಗೆ ಸಂಸ್ಕಾರ ಕಲಿಯಬೇಕು. ಇದಕ್ಕೆ ಪೂರಕವಾಗಿ ಭಾರತ ಸೇವಾದಳ, ಎನ್‌ಎಸ್‌ಎಸ್, ಸ್ಕೌಟ್ ಆ್ಯಂಡ್ ಗೈಡ್ಸ್ ಕಾರ್ಯ ಶ್ಲಾಘನೀಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯ್ಕ ಹೇಳಿದ್ದಾರೆ.
ನಗರದ ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸೇವಾದಳ, ಪದವಿಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನೆನಪಿನಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಗುರುವಾರ ಏರ್ಪಡಿಸಲಾಗಿದ್ದ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ವ್ಯಕ್ತಿ ಮಾಡುವ ಕೆಲಸ ಕಾರ್ಯಗಳನ್ನು ಸೇವೆ ಎನ್ನುತ್ತೇವೆ. ಇದಕ್ಕೆ ಹಣ ಪಡೆದು ಮಾಡುವ ಕೆಲಸ ಸೇವೆ ಅನ್ನಿಸುವುದಿಲ್ಲ ಎಂದು ಹೇಳಿದರು.ಸಮಾಜದಲ್ಲಿ ಬಹಳಷ್ಟು ಜನ ಅನೇಕ ತೊಂದರೆಗಳಿಂದ ಬಳಲುತ್ತಿದ್ದಾರೆ, ಅಪಘಾತ, ಆಸ್ಪತ್ರೆಗಳಿಗೆ ಹೋಗಲಾಗದ ಸ್ಥಿತಿ ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ ಎಂದು ವಿಷಾಧಿಸಿದ ಅವರು, ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದಾಗ ಅವರು ಕೊಡುವ ಆಶೀರ್ವಾದ ಯಾವುದಕ್ಕೂ ಸಮವಾಗುವುದಿಲ್ಲ, ಆದ್ದರಿಂದ ಸೇವಾ ಮನೋಭಾವ ಎಲ್ಲರಲ್ಲಿ ಮೂಡಬೇಕಾಗಿರುವುದು ಅಗತ್ಯಎಂದರು.ಸೇವೆ ಸಲ್ಲಿಸುವ ಕುರಿತು ಹಾಗೂ ಅದರ ಮಹತ್ವದ ಬಗ್ಗೆ ಇಂದು ಉಪನ್ಯಾಸಕರಿಗೆ ಆಯೋಜಿಸಿರುವ ಕಾರ್ಯಾಗಾರ ತುಂಬಾ ಉಪಯುಕ್ತ. ಈ ಮೂಲಕ ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಸೇವೆ ಸಲ್ಲಿಸುವ ವಾತಾ ವರಣ ನಿರ್ಮಾಣವಾಗಲು ಸಹಕಾರಿಯಾಗಲಿ ಎಂದು ಹೇಳಿದರು.ಮಾಜಿ ಶಾಸಕ ಹಾಗೂ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಐ.ಬಿ ಶಂಕರ್ ಮಾತನಾಡಿ, ಶಿಸ್ತು ಪಾಲನೆ ಯಾದಾಗ ಮಾತ್ರ ಚಳುವಳಿಗಳು ಯಶಸ್ವಿಯಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಯುವಕರನ್ನು ಸಂಘಟಿಸಿ ಅವರಲ್ಲಿ ದೇಶ ಪ್ರೇಮ ಬಿತ್ತಿದಾಗ ಶಿಸ್ತು ತಾನಾಗೇ ಬರುವುದರ ಜೊತೆಗೆ ಹೆಚ್ಚು ಬೆಲೆ ಬರುತ್ತದೆ ಎಂದು ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.ಸಮಾಜದಲ್ಲಿ ನೊಂದವರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಅದರ ಹತ್ತು ಪಟ್ಟು ಹೆಚ್ಚು ಭಗವಂತ ಕಲ್ಪಿಸುತ್ತಾನೆ. ಈ ನಿಟ್ಟಿ ನಲ್ಲಿ ಸೇವಾದಳ ಆಶಯಗಳನ್ನು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನೀತಿ ಪಾಠ ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಂಘಟಕ ಕೆ.ಬಿ. ಚಂದ್ರಕಾಂತ್ ಮಾತನಾಡಿ, ಬ್ರಿಟೀಷರೇ ಭಾರತ ಬಿಟ್ಟುತೊಲಗಿ ಎಂಬ ಘೋಷಣೆ ಕ್ವಿಟ್ ಇಂಡಿಯಾ ಚಳುವಳಿ ಮೊಳಗಿದ ಈ ದಿನ ಬಹಳ ಮಹತ್ವದ್ದಾಗಿದೆ. ಭಾರತ ಸ್ವತಂತ್ರ ಹೋರಾಟದಲ್ಲಿ ಭಾರತ ಸೇವಾದಳ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.1923 ರಲ್ಲಿ ಮಹಾತ್ಮಗಾಂಧೀಜಿಯವರ ಮಾರ್ಗದರ್ಶನದಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ, ನಾ.ಸು ಹರ್ಡೀಕರ್ ನೇತೃತ್ವದಲ್ಲಿ ಸ್ಥಾಪಿತವಾದ ಭಾರತ ಸೇವಾದಳ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆಯನ್ನು ದೇಶದ ಯುವಕರಲ್ಲಿ ತುಂಬುವ ಉದ್ದೇಶವಾಗಿತ್ತು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಯು ಕಾಲೇಜಿನ ಪ್ರಾಂಶುಪಾಲ ಸತೀಶ್ ಶಾಸ್ತ್ರಿ ಮಾತನಾಡಿದರು. ಉಪ ಪ್ರಾಂಶುಪಾಲರಾದ ಚಂದ್ರಮ್ಮ, ಸಂಪನ್ಮೂಲ ವ್ಯಕ್ತಿ ಕಿರಣ್‌ಕುಮಾರ್, ಭಾರತ ಸೇವಾದಳದ ತಾಲೂಕು ಉಪಾಧ್ಯಕ್ಷ ಕಾಳಯ್ಯ ಶ್ರೀನಿವಾಸ್, ಲೋಕೇಶ್ವರಾಚಾರ್, ಕಾಳಯ್ಯ ಉಪಸ್ಥಿತರಿದ್ದರು. 8 ಕೆಸಿಕೆಎಂ 1ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಏರ್ಪಡಿಸಲಾಗಿದ್ದ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಶಿಬಿರವನ್ನು ಪುಟ್ಟನಾಯ್ಕ ಉದ್ಘಾಟಿಸಿದರು.