ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ಮತ್ತವರ ಮೈತ್ರಿ ಪಕ್ಷದ ನಾಯಕರಿಗೆ ದಮ್ಮು, ತಾಕತ್ತು ಇದ್ದರೆ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲೆಸೆದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಸರಿಯಾಗಿ ನಡೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೈಲಲ್ಲಿರಬೇಕಾಗುತ್ತದೆ. ಚೆಕ್‌ನಲ್ಲಿ ಲಂಚ ಪಡೆದ ದಾಖಲೆ ಇವರ ಹೆಸರಿಗಿದೆ. ಭ್ರಷ್ಟಾಚಾರದ ರೂವಾರಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಜನರಿಗೆ ಈ ಮೈತ್ರಿ ನಾಯಕರ ನಾಟಕ ಗೊತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಚ್ಛ ಆಡಳಿತ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲದ ಆರೋಪ ಮಾಡಿದ್ದಾರೆ. ರಾಜ್ಯಪಾಲರು ಸತ್ಯದ ಪರ ಇರಬೇಕು. ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡು ರೀತಿಯ ಪ್ರಕರಣಗಳಿಗೆ ಬೆಂಬಲ ನೀಡಬಾರದು ಎಂದು ಹೇಳಿದರು.ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿನ ಅಕ್ರಮ ನೇಮಕಾತಿಗಳಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರರ ಕೈವಾಡವಿದೆ. ಆ ಪ್ರಕರಣ ತನಿಖೆ ಯಾಗಬೇಕೆಂದು ಈಗಾಗಲೇ ಪತ್ರ ಅರ್ಜಿ ಕೊಟ್ಟಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವರುಗಳು ಮಾಡಿರುವ ಅಕ್ರಮಗಳ ತನಿಖೆ ಆಗುತ್ತದೆ. ಮಾಚೇನಹಳ್ಳಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಅಗ್ಗದ ದರದಲ್ಲಿ ಭೂಮಿ ನೀಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
ನೆರೆ ಸಂತ್ರಸ್ತರಿಗೆ ಪರಿಹಾರ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ನನ್ನ ಕ್ಷೇತ್ರವೊಂದರಲ್ಲೇ ನೂರು ಕೋಟಿಗೂ ಅಧಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಸರಕಾರಿ ಕಟ್ಟಡಗಳೂ ಸೇರಿದಂತೆ ಸಾರ್ವಜನಿಕ ಆಸ್ತಿಗೆ ಅಪಾರ ಹಾನಿಯಾ ಗಿದೆ. ಪರಿಹಾರ ಕಾರ್ಯಗಳನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು. ಸರ್ಕಾರ ಹಕ್ಕು ಪತ್ರ ಇಲ್ಲದ ಮನೆಗಳಿಗೆ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಕ್ಷೇತ್ರದಲ್ಲಿ ಕೊಚ್ಚಿಹೋಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಯನ್ನು ತಕ್ಷಣ ಮಾಡಬೇಕು. ಈ ಬಗ್ಗೆ ಸಚಿವರೊಂದಿಗೆ ಮಾತನಾಡುವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹುಲ್ತಿ ಕೊಪ್ಪ ಶ್ರೀಧರ್, ಗಿರೀಶ್ ಕೋವಿ, ಪದ್ಮನಾಭ್, ಶಿ.ಜು.ಪಾಶಾ ಇದ್ದರು.ನನ್ನ ಮೇಲೂ ವಿರೋಧಿಗಳ ಪಿತೂರಿ: ಶಾಸಕ
ಕೆಪಿಟಿಸಿಎಲ್ ಎಂಜನಿಯರ್ ಶಾಂತಕುಮಾರ್ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ಅವರ ಹಿಂದೆ ನನ್ನ ರಾಜಕೀಯ ವಿರೋಧಿಗಳಿರುವ ಅನುಮಾನ ಇದೆ. ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವಿಡಿಯೋ ತುಣಕನ್ನು ಮಾಜಿ ಶಾಸಕರು ಎಲ್ಲರಿಗೂ ಕಳಿಸುತ್ತಿದ್ದಾರೆ. ಪರಿಷತ್ ಸದಸ್ಯ ಸಿ.ಟಿ.ರವಿ ನನ್ನ ರಾಜೀನಾಮೆ ಕೇಳಿದ್ದಾರೆ. ಮಂತ್ರಿಯಾಗಿದ್ದ ರವಿ ಈ ರೀತಿ ಹಗುರವಾಗಿ ಮಾತನಾಡಬಾರದು. ನಾನು ವಿದೇಶದಲ್ಲಿದ್ದಾಗ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂದರು.ನ್ಯಾಯಾಲಯದಲ್ಲಿ ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವೆ. ಆರೋಪ ಮಾಡಿದ್ದ ವ್ಯಕ್ತಿ ಯಾರೆಂದೇ ನಂಗೆ ಗೊತ್ತಿಲ್ಲ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದೆ ನ್ಯಾಯಾಧೀಶರ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.