ಅತಿಕ್ರಮಣ ಮಂಜೂರಿಗೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿ: ಭೀಮಣ್ಣ ನಾಯ್ಕ

| Published : Jul 30 2024, 12:36 AM IST

ಅತಿಕ್ರಮಣ ಮಂಜೂರಿಗೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಭೂಮಿಯನ್ನು ಪಾರಂಪರಿಕವಾಗಿ ಅತಿಕ್ರಮಿಸಿಕೊಂಡು ಜೀವನ ಸಾಗಿಸುತ್ತಿರುವವರು ಸಲ್ಲಿಸಬೇಕಾದ ೭೫ ವರ್ಷದ ದಾಖಲೆಗಳ ಬದಲಿಗೆ ೨೫ ವರ್ಷ ಎಂದು ಪರಿಗಣಿಸಿ ಭೂಮಿಯನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ಶಾಸನ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯ ಸಂಸದರಾದಿಯಾಗಿ, ರಾಜ್ಯದ ಎಲ್ಲ ಪಕ್ಷದ ಸಂಸದರು ಒಗ್ಗಟ್ಟಾಗಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶಿರಸಿ: ಅರಣ್ಯ ಭೂಮಿಯನ್ನು ಪಾರಂಪರಿಕವಾಗಿ ಅತಿಕ್ರಮಿಸಿಕೊಂಡು ಜೀವನ ಸಾಗಿಸುತ್ತಿರುವವರು ಸಲ್ಲಿಸಬೇಕಾದ ೭೫ ವರ್ಷದ ದಾಖಲೆಗಳ ಬದಲಿಗೆ ೨೫ ವರ್ಷ ಎಂದು ಪರಿಗಣಿಸಿ ಭೂಮಿಯನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ಶಾಸನ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯ ಸಂಸದರಾದಿಯಾಗಿ, ರಾಜ್ಯದ ಎಲ್ಲ ಪಕ್ಷದ ಸಂಸದರು ಒಗ್ಗಟ್ಟಾಗಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಲಕ್ಷಾಂತರ ಕುಟುಂಬಗಳು ಹಲವಾರು ವರ್ಷಗಳಿಂದ ಅರಣ್ಯ ಭೂಮಿ ಅತಿಕ್ರಮಿಸಿಕೊಂಡು ಜೀವನ ಸಾಗಿಸುತ್ತಾರೆ. ಆದರೆ ಈ ನಡುವೆ ಅವರು ಅನುಭವಿಸುತ್ತಿರುವ ತೊಂದರೆ ನಿವಾರಿಸಲು ಮತ್ತು ಅವರಿಗೆ ಭೂಮಿ ನೀಡುವಂತೆ ರವೀಂದ್ರ ನಾಯ್ಕ ಸೇರಿದಂತೆ ಹಲವರು ಹೋರಾಟ ಮಾಡಿದ್ದಾರೆ. ಅವರಿಗೆ ನ್ಯಾಯ ಒದಗಿಸಿ, ಅರಣ್ಯ ಅತಿಕ್ರಮಣದಾರರಿಗೆ ಭೂಮಿ ನೀಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಒಕ್ಕೂರಲಿನಿಂದ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬೆಟ್ಟ ಭೂಮಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂಬ ಬಿಜೆಪಿ ಸರ್ಕಾರ ಇದ್ದಾಗ ನಿರ್ಣಯ ಕೈಗೊಳ್ಳಲಾಗಿತ್ತು. ಅದರ ಕುರಿತು ಪ್ರಶ್ನಿಸಿ, ಅವರನ್ನು ಭೂ ಒಡೆತನದವರಿಗೆ ನೀಡಬೇಕು ಎಂದು ಆಗ್ರಹಿಸಿದ್ದೇನೆ. ಬೆಟ್ಟ ಭೂಮಿ ಯಾವುದೇ ಕಾರಣಕ್ಕೂ ಸರ್ಕಾರದ ವಶಕ್ಕೆ ಹೋಗದೇ ಭೂ ಮಾಲೀಕರ ಬಳಕೆಗೆ ಸಿಗಬೇಕು. ಈ ಬಗ್ಗೆ ಜಿಲ್ಲೆಯ ರೈತರ ಪರವಾಗಿ ಸರ್ಕಾರವನ್ನು ಒತ್ತಾಯ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಹೋರಾಟ ಮಾಡುತ್ತೇನೆ. ಕಳೆದ ೨೦ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕ್ಷೇತ್ರದಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈಗಾಗಲೇ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ವಾಸ್ತವ್ಯದ ಮನೆ ಹಾನಿಯಾದ ಕುಟುಂಬಕ್ಕೆ ₹೧.೨೦ ಲಕ್ಷ ಆರ್ಥಿಕ ಸಹಾಯ ಮಾಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭಾ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಜಿಪಂ ಮಾಜಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ, ಪ್ರಮುಖರಾದ ದೀಪಕ ದೊಡ್ಡೂರು, ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ, ಸುಮಾ ಉಮಾ ಉಗ್ರಾಣಕರ, ಗೀತಾ ಶೆಟ್ಟಿ ಮತ್ತಿತರರು ಇದ್ದರು.ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಚಣೆ: ಅರಣ್ಯ ಇಲಾಖೆಯ ವಿಳಂಬದಿಂದ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಗುತ್ತಿಗೆ ಕಂಪನಿ ಹೇಳುತ್ತಿದೆ ಎಂದು ಮಾಧ್ಯಮದವರು ಶಾಸಕರ ಗಮನಕ್ಕೆ ತಂದಾಗ, ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಶಿರಸಿ-ಹಾವೇರಿ ಹೆದ್ದಾರಿಯ ಅರಣ್ಯ ಜಾಗ ಹಸ್ತಾಂತರದ ದಾಖಲೆಪತ್ರಗಳು ಅರಣ್ಯ ಭವನದಲ್ಲಿ ಸಲ್ಲಿಕೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಅರಣ್ಯ ಸಚಿವರ ಜತೆ ಚರ್ಚಿಸಿ, ರಾಜ್ಯ ಸರ್ಕಾರದಿಂದ ಆದಷ್ಟು ಬೇಗ ಸಮಸ್ಯೆ ನಿವಾರಣೆಗೆ ಆದ್ಯತೆ ಮೇರೆಗೆ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ರೈತರಿಗೆ ಮೋಸ ಸಹಿಸುವುದಿಲ್ಲ: ಯಲ್ಲಾಪುರದ ಎಪಿಎಂಸಿ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳಿಂದ ಅಡಕೆ ಬೆಳೆಗಾರರಿಗೆ ಅನ್ಯಾಯವಾಗುತ್ತಿರುವ ಕುರಿತು ಅನೇಕ ಜನರು ನನ್ನ ಗಮನಕ್ಕೆ ತಂದಿದ್ದಾರೆ. ಎಪಿಎಂಸಿ, ದಲಾಲಿ ಸಂಸ್ಥೆ ಹಾಗೂ ವ್ಯಾಪಾರಸ್ಥರಿಂದ ರೈತರಿಗೆ ಮೋಸ ಆಗುವುದನ್ನು ನಾನು ಸಹಿಸುವುದಿಲ್ಲ. ರೈತರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಜತೆ ಮಾತನಾಡುತ್ತೇನೆ. ಸಮಗ್ರ ತನಿಖೆಯಾಗಿ ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಭೀಮಣ್ಣ ನಾಯ್ಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.