ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲಿ-ಪಾಲಾಕ್ಷಪ್ಪ

| Published : Jan 07 2024, 01:30 AM IST

ಸಾರಾಂಶ

ಬಳ್ಳಾರಿ ನಗರದ ಅಲ್ಲಂ ಸುಮಂಗಳಮ್ಮ ಪಿಯು ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ ಕಾಲೇಜಿನಲ್ಲಿ ನಡೆಯಿತು.

ಬಳ್ಳಾರಿ: ನಗರದ ವೀವಿ ಸಂಘದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ ಕಾಲೇಜು ಸಭಾಂಗಣದಲ್ಲಿ ಶನಿವಾರ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ. ಪಾಲಾಕ್ಷಪ್ಪ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಜತೆಗೆ ಗುರಿ ಸಾಧನೆಗೆ ನಿರಂತರ ಶ್ರಮಿಸಬೇಕು. ಮುಂದಿನ ನಿಲುವು ಹಾಗೂ ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಇರಬೇಕು. ವಿದ್ಯಾರ್ಥಿ ದೆಸೆಯ ಶೈಕ್ಷಣಿಕ ಚಟುವಟಿಕೆಯಲ್ಲಿ ಎಂದೂ ನಿರ್ಲಕ್ಷ್ಯ ವಹಿಸಬಾರದು ಎಂದು ಸಲಹೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕುಪ್ಪಗಲ್ ಗಿರಿಜಾ ಅವರು, ಪ್ರತಿಷ್ಠಿತ ವೀವಿ ಸಂಘದ ಎಎಸ್‌ಎಂ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ನಿಜಕ್ಕೂ ಭಾಗ್ಯಶಾಲಿಗಳಾಗಿದ್ದಾರೆ. ಅನೇಕ ಮಹನೀಯರ ದಾನಿ-ಧರ್ಮಾದಿಗಳಿಂದ ವೀವಿ ಸಂಘ ಹಾಗೂ ವಿವಿಧ ಶಾಲಾ ಕಾಲೇಜುಗಳು ಅಸ್ತಿತ್ವ ಪಡೆದುಕೊಂಡಿವೆ. ಎಲ್ಲ ಸಮುದಾಯಕ್ಕೆ ಅಕ್ಷರ ಸಿಗಬೇಕು. ಶೈಕ್ಷಣಿಕ ಪ್ರಗತಿಯಿಂದ ಮಾತ್ರ

ಬದುಕು ಬದಲಾಗಲು ಸಾಧ್ಯ ಎಂದರಿತ ಹಿರಿಯರು, ಸುಸಜ್ಜಿತ ಕಾಲೇಜು ನಿರ್ಮಿಸಿ, ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಇದರ ಪ್ರಯೋಜನ ಪ್ರತಿಯೊಬ್ಬ ವಿದ್ಯಾರ್ಥಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ, ಕಷ್ಟಪಡದೆ ಯಾವುದೇ ಸುಲಭವಾಗಿ ದಕ್ಕುವುದಿಲ್ಲ. ಗುರಿ ಸಾಧನೆಗೆ ಒಳ ದಾರಿಗಳು ಇರುವುದಿಲ್ಲ. ಕಷ್ಟಪಟ್ಟೇ ಸಾಧಿಸಬೇಕು ಎಂದರು.

ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಎಸ್. ಅಶೋಕಗೌಡ, ಪಲ್ಲೇದ ರೂಪಶ್ರೀ ಹಾಗೂ ಎಚ್.ಕೆ. ಗೌರಿಶಂಕರ್ ಮಾತನಾಡಿ, ಪಿಯುಸಿ ಹಂತದ ಶಿಕ್ಷಣದ ಮಹತ್ವ, ವಿದ್ಯಾರ್ಥಿ ಬದುಕಿನ ಮಹತ್ವದ ತಿರುವು ಕುರಿತು ವಿವರಿಸಿದರು.ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಗೋವಿಂದರಾಜು ಅವರು ಶಿಕ್ಷಣದ ಪ್ರಾಮುಖ್ಯತೆ, ನಿರಂತರ ಅಧ್ಯಯನ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಸಿದರಲ್ಲದೆ, ಕಾಲೇಜಿನಲ್ಲಿ ಓದಿದ ಅನೇಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು, ಪ್ರತಿಯೊಬ್ಬರೂ ಸಾಧನೆಗೈಯಲು ಅವಕಾಶವಿದೆ ಎಂದು ಹೇಳಿದರು.ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು. ಕೊನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.