ಸಾರಾಂಶ
ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ್ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹಣ ಖರ್ಚು ಮಾಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು.
ನರಗುಂದ: ಸರ್ಕಾರ ಶಾಲೆಗಳು ಖಾಸಗಿ ಶಾಲೆಗಳಗಿಂತ ಹಿಂದೆ ಬೀಳಬಾರದೆಂದು ಸರ್ಕಾರ ಎಲ್ಲ ಸರ್ಕಾರ ಶಾಲೆಗಳಿಗೆ ಸೌಲಭ್ಯಗಳನ್ನು ನೀಡುತ್ತದೆ. ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ತಾಲೂಕಿನ ಚಿಕ್ಕನರಗುಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಭೂಮಿಪೂಜಾ ಸಮಾರಂಭದಲ್ಲಿ ಮಾತನಾಡಿ, ಒಂದು ಕುಟುಂಬ ಒಂದು ಮನೆ ಮುಂದೆ ಬರಬೇಕೆಂದರೆ ಆ ಮನೆಯಲ್ಲಿ ಶಿಕ್ಷಣವಂತರು ಇದ್ದರೆ ಮಾತ್ರ ಸಾಧ್ಯ. ಆದ್ದರಿಂದ ನಾನು ಈ ಹಿಂದೆ ಸಚಿವನಿದ್ದ ಸಮಯದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ, ಈ ಗ್ರಾಮದ ಶಾಲಾ ಕೊಠಡಿಗೆ ₹151.20 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೆ. ಆದರೆ ಕೆಲವು ಕಾರಣಗಳಿಂದ ಈ ಅನುದಾನ ಬರುವುದು ವಿಳಂಬವಾಗಿತ್ತು. ಈ ಶಾಲಾ ಕಟ್ಟಡಕ್ಕೆ ಈಗ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹಣ ಖರ್ಚು ಮಾಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಅಭ್ಯಾಸ ಮಾಡಿ ಮುಂದೆ ಈ ದೇಶಕ್ಕೆ ಸೇವೆ ಸಲ್ಲಿಸಿದರೆ ಈ ಹಣ ಖರ್ಚು ಮಾಡಿದ್ದಕ್ಕೆ ಸಾರ್ಥಕ ಆಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಡಾ. ಸಿ.ಕೆ. ರಾಚನಗೌಡ್ರ, ಶರಣಪ್ಪ ಹಳೇಮನಿ, ಬಿ.ವಿ. ಪಾಟೀಲ, ಆರ್.ಬಿ. ರಾಚನಗೌಡ್ರ, ಗ್ರಾಪಂ ಸದಸ್ಯ ಮುತ್ತು ರಾಯರಡ್ಡಿ, ಆರ್.ವಿ. ಕುರ್ತಿಕೋಟಿ, ಶ್ರುತಿ ಬ್ಯಾಳಿ, ಎ.ಎಂ. ತೇಲಿ, ಶೋಭಾ ಕೋರವನ್ನವರ, ಹೊಸಗಾಣಿಗೇರ, ಸುವರ್ಣಾ ಬಳಗಲಿ, ಬಸವರಾಜ ತಳವಾರ, ಎಂ.ಎಸ್. ತೋರಗಲ್ ಉಪಸ್ಥಿತರಿದ್ದರು.