ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಬಡ್ತಿ ಪಡೆಯಲು ಕಡ್ಡಾಯ ಮಾಡಿದ್ದ ಟಿಇಟಿಯಿಂದ ವಿನಾಯ್ತಿ ನೀಡಿ 6, 7, 8ನೇ ತರಗತಿವರೆಗೂ ಪಾಠ ಮಾಡುವ ಅವಕಾಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಕೆಪಿಸಿಸಿ ಶಿಕ್ಷಕರು ಮತ್ತು ಪದವೀಧರರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಹೇಳಿದ್ದಾರೆ.

ರಾಣಿಬೆನ್ನೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಬಡ್ತಿ ಪಡೆಯಲು ಕಡ್ಡಾಯ ಮಾಡಿದ್ದ ಟಿಇಟಿಯಿಂದ ವಿನಾಯ್ತಿ ನೀಡಿ 6, 7, 8ನೇ ತರಗತಿವರೆಗೂ ಪಾಠ ಮಾಡುವ ಅವಕಾಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಕೆಪಿಸಿಸಿ ಶಿಕ್ಷಕರು ಮತ್ತು ಪದವೀಧರರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವ ತೀರ್ಮಾನದಿಂದ ಕನಿಷ್ಠ ₹10 ಸಾವಿರದಿಂದ ₹50 ಸಾವಿರದ ವರೆಗೂ ವೇತನ ಹೆಚ್ಚಳದ ಲಾಭ ಲಭಿಸುವಂತಾಗಿದೆ. 1985ರಿಂದ 95ರ ವರೆಗೆ ಪ್ರಾರಂಭವಾದ ಅನುದಾನಿತ ಶಾಲಾ–ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಿರುವುದು, 20 ವರ್ಷಗಳಿಂದ ಅನುದಾನಿತ ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿ ಆಗದಿರುವುದನ್ನು ಪರಿಗಣಿಸಿ 2015ರ ವರೆಗಿನ ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡಲಾಗಿದೆ. ಈಗ ಪುನಃ 2016ರಿಂದ 2020ರ ವರೆಗಿನ ಖಾಲಿ ಹುದ್ದೆಗಳನ್ನು ತುಂಬಲು ಆದೇಶಿಸಲಾಗಿದೆ. ಎಲ್ಲ ಹಂತದ ಶಾಲಾ-ಕಾಲೇಜುಗಳ ಅತಿಥಿ ಶಿಕ್ಷಕ ಉಪನ್ಯಾಸಕರ ವೇತನ ಹೆಚ್ಚಿಸಿದ್ದು, ಆರೋಗ್ಯ ವಿಮೆ ನೀಡಿ, ನಿವೃತ್ತಿ ಕಾಲಕ್ಕೆ ₹5 ಲಕ್ಷ ಇಡುಗಂಟು ನೀಡುವಂತೆ ತೀರ್ಮಾನ ಮಾಡಲಾಗಿದೆ. ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಜಾರಿಗೆ ತಂದಿರುವುದು ಹಾಗೂ ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಕಾರ್ಯಕ್ರಮದ ಮೂಲಕ ಹಣ ನೀಡಲಾಗುತ್ತಿದೆ. ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯದ ಶಿಕ್ಷಕರು ಹಾಗೂ ಪದವೀಧರರು ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.