ಮಾಧ್ಯಮ ಸ್ವಯಂ ನೀತಿ ಸಂಹಿತೆಯಡಿ ಸತ್ಯ ತಿಳಸಲಿ: ಸಚಿವ ಈಶ್ವರ ಖಂಡ್ರೆ

| Published : Jul 30 2024, 12:31 AM IST

ಮಾಧ್ಯಮ ಸ್ವಯಂ ನೀತಿ ಸಂಹಿತೆಯಡಿ ಸತ್ಯ ತಿಳಸಲಿ: ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ತಗಡೂರು ಹಾಗೂ ಜಿಲ್ಲಾ ವಾರ್ತಾ ಅಧಿಕಾರಿ ಜಿ. ಸುರೇಶರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಮಾಧ್ಯಮದವರು ತಮ್ಮದೆಯಾದ ನೀತಿ ಸಂಹಿತೆ ಮಾಡಿ ಸತ್ಯವನ್ನೆ ಬರೆಯಿರಿ, ಸುಳ್ಳೆ ಸತ್ಯ ಎಂಬಂತೆ ಬಿಂಬಿಸುವುದು ಸರಿಯಾದ ಬೆಳವಣೆಗೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಬೀದರ್‌ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದ್ದು ಪತ್ರಕರ್ತರು ವಸ್ತುನಿಷ್ಠ, ನಿಖರ ಸುದ್ದಿ ಪ್ರಸಾರ ಮಾಡಬೇಕು ಅಂದಾಗ ಸಮಾಜದಲ್ಲಿ ಬದಲಾವಣೆಯಾಗುತ್ತದೆ ಎಂದರು.

ಸಮಾಜದಲ್ಲಿನ ಲೋಪ-ದೋಷ ಎತ್ತಿ ಹಿಡಿಯುವದು ಪತ್ರಿಕಾ ರಂಗದ ಧರ್ಮವಾಗಿದೆ ಮತ್ತು ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹಿಂದಿನ ದಿನಗಳಲ್ಲಿ ಯಾವುದೇ ಸಾಮಾಜಿಕ ಮಾಧ್ಯಮಗಳು ಇಲ್ಲದ ಸಮಯದಲ್ಲಿ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಪತ್ರಿಕೆಗಳು ಮಾಡಿವೆ. ಯಾವುದೇ ಒಂದು ಸಮಸ್ಯೆ ಸುದ್ದಿಮಾಧ್ಯಮಗಳಲ್ಲಿ ಬಂದಾಗ ಮಾತ್ರ ಅದಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ.

ರಾಷ್ಟ್ರೀಯತೆ ಸಂದರ್ಭದಲ್ಲಿ ಗಾಂಧೀಜಿ, ಬಾಲಗಂಗಾಧರ ತಿಲಕ ಮತ್ತು ಅಂಬೇಡ್ಕರಂತಹ ಹಲವಾರು ನಾಯಕರು ಪತ್ರಿಕೆಗಳ ಮುಖಾಂತರ ಜನರಿಗೆ ಮಾಹಿತಿ ತಲುಪಿಸುವ ಮೂಲಕ ಜನರಿಗೆ ಜಾಗೃತಿಗೊಳಿಸುತ್ತಿದ್ದರು ಎಂದು ನುಡಿದರು.

ಪೌರಾಡಳಿತ ಸಚಿವ ರಹೀಂಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸರ್ಕಾರ ಪತ್ರಕರ್ತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜಾಧ್ಯಕ್ಷ ಶಿವಾನಂದ ತಗಡೂರು ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೀದರ ಪತ್ರಿಕಾ ಭವನಕ್ಕೆ ನನ್ನ ಕಡೆಯಿಂದ ಸಹಾಯ ಸಹಕಾರ ನೀಡಲಾಗುವುದು ಎಂದರು.

ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾಸಾರ್ಹತೆಯಿಂದ ಕೆಲಸ ಮಾಡುವ ಮೂಲಕ ಪತ್ರಿಕಾ ರಂಗದ ಆಳ ಮತ್ತು ಅಗಲ ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದ ಪತ್ರಕರ್ತರ ಬಸ್ ಪಾಸ ವಿತರಣೆಯು ಚುನಾವಣೆ ಬಂದ ಕಾರಣ ವಿಳಂಬವಾಗಿದೆ. ಸುಳ್ಳು ಸುದ್ದಿ ಹಾಗೂ ಬ್ಲ್ಯಾಕ್‌ ಮೇಲ ಮಾಡುವ ಪತ್ರಕರ್ತರನ್ನು ದೂರ ಮಾಡುವ ಕೆಲಸ ನಾವೇ ಮಾಡಬೇಕಿದೆ ಸಮಾಜದ ಒಳಿತಿಗಾಗಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.

ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಮಾತನಾಡಿ, ಸತ್ಯ ಬರೆಯುವವರಿಗೆ ರಕ್ಷಣೆ ಇಲ್ಲ. ಹೊಗಳಿದರೆ ಹಣ ಪಡೆದು ಬರೆದಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ ಹೀಗಾಗಿ ಪತ್ರಕರ್ತರಿಗೆ ಬದ್ಧತೆ ಇರಬೇಕು ಎಂದ ಅವರು, ಪತ್ರಿಕೆಗಳಲ್ಲಿ ಸಣ್ಣದು ದೊಡ್ಡದು ಎಂದು ತಾರತಮ್ಯ ಮಾಡಬಾರದು ಎಲ್ಲವು ಒಂದೇ ಎನ್ನುವಂತಾಗಬೇಕು.

ಸಂಘದ ರಾಜ್ಯ ಉಪಾಧ್ಯಕ್ಷ ವೇಂಕಟಸಿಂಗ ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪರಾವ ಸೌದಿ ನಿರೂಪಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತರ ಸಮಸ್ಯೆಗಳ ಕುರಿತು ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಸ್ವಾಗತಿಸಿದರು. ಮಾಳಪ್ಪ ಅಡಸಾರೆ ವಂದಿಸಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ತಗಡೂರು ಹಾಗೂ ಜಿಲ್ಲಾ ವಾರ್ತಾ ಅಧಿಕಾರಿ ಜಿ. ಸುರೇಶ ಅವರನ್ನು ಸನ್ಮಾನಿಸಲಾಯಿತು.