ನಿರುದ್ಯೋಗಿಗಳು ಪಿಎಂ ವಿಶ್ವಕರ್ಮ ಯೋಜನೆ ಲಾಭ ಪಡೆಯಲಿ

| Published : Dec 14 2023, 01:30 AM IST

ಸಾರಾಂಶ

ಪ್ರಸ್ತುತ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭ್ಯರ್ಥಿಗಳು ಹೆಸರು ನೋಂದಾಯಿಸಿಲ್ಲ. ಆದ್ದರಿಂದ ಅರ್ಹರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿ, ಸೌಲಭ್ಯಗಳ ಲಾಭ ಪಡೆಯಬೇಕು. ನಗರ ಮತ್ತು ಪಟ್ಟಣ ಪ್ರದೇಶ ಮಾತ್ರವಲ್ಲದೇ ಗ್ರಾ.ಪಂ. ಮಟ್ಟದಲ್ಲಿಯೂ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದು. ಈ ಸಂಬಂಧ ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡಿ, ಗುರಿ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ವಿಶ್ವಕರ್ಮ ಸಮುದಾಯದವರಲ್ಲದೇ, ಇತರೇ ಎಲ್ಲ ಸಮುದಾಯವರು ಯೋಜನೆಯಡಿ ಹೆಸರು ನೋಂದಾಯಿಸಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಉಪಕರಣಗಳು ಮತ್ತು ಸಲಕರಣೆಗಳಿಂದ ಏನನ್ನಾದರೂ ಸೃಜಿಸುವ ಸಾಂಪ್ರದಾಯಿಕ ಕುಲಕಸುಬುದಾರರು ಸೇರಿದಂತೆ ಬಹುಸಂಖ್ಯಾತರ ಸರ್ವಾಂಗೀಣ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಅರ್ಹ ನಿರುದ್ಯೋಗಿ ಯುವಕರು ಈ ಯೋಜನೆ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಿ.ಎಂ. ವಿಶ್ವಕರ್ಮ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಸಮುದಾಯವು ಈ ಯೋಜನೆಯಡಿ ತರಬೇತಿ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಬೆಂಬಲ ಮತ್ತಿತರ ಸಹಕಾರವನ್ನು ಪಡೆದುಕೊಂಡು ತಮ್ಮ ಭವಿಷ್ಯದ ಜೀವನ ನೆಮ್ಮದಿ ಆಗಿರುವಂತೆ ರೂಪಿಸಿಕೊಳ್ಳಬಹುದು ಎಂದರು.

ಎಲ್ಲ ಸಮುದಾಯಗಳಿಗೂ ಅವಕಾಶ:

ಪ್ರಸ್ತುತ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭ್ಯರ್ಥಿಗಳು ಹೆಸರು ನೋಂದಾಯಿಸಿಲ್ಲ. ಆದ್ದರಿಂದ ಅರ್ಹರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿ, ಸೌಲಭ್ಯಗಳ ಲಾಭ ಪಡೆಯಬೇಕು. ನಗರ ಮತ್ತು ಪಟ್ಟಣ ಪ್ರದೇಶ ಮಾತ್ರವಲ್ಲದೇ ಗ್ರಾ.ಪಂ. ಮಟ್ಟದಲ್ಲಿಯೂ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದು. ಈ ಸಂಬಂಧ ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡಿ, ಗುರಿ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ವಿಶ್ವಕರ್ಮ ಸಮುದಾಯದವರಲ್ಲದೇ, ಇತರೇ ಎಲ್ಲ ಸಮುದಾಯವರು ಯೋಜನೆಯಡಿ ಹೆಸರು ನೋಂದಾಯಿಸಬಹುದು ಎಂದು ಹೇಳಿದರು.

ಪ್ರಮಾಣಪತ್ರ- ಉಪಕರಣ:

ವಿವಿಧ ವೃತ್ತಿಗಳಲ್ಲಿ ತೊಡಗಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ವಿವಿಧ ಸೌಲಭ್ಯಗಳನ್ನು ಪಡೆಯಲು ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೇ, ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಜಿಲ್ಲಾ ಸಮಿಯಿಂದ ಪಿ.ಎಂ. ವಿಶ್ವಕರ್ಮ ಪ್ರಮಾಣಪತ್ರ, ಗುರುತಿನ ಚೀಟಿ, ಕೌಶಲ್ಯಾಭಿವೃದ್ಧಿ ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೇ, 5-7 ದಿನಗಳ ತರಬೇತಿ ನೀಡಲಾಗುವುದು. ತರಬೇತಿಯ ನಂತರ ₹15,000 ಮೌಲ್ಯದ ಉಪಕರಣಗಳನ್ನು ಒದಗಿಸಲಾಗುವುದು ಎಂದರು.

ಅಲ್ಲದೇ, ತರಬೇತಿ ಪಡೆದ ಕುಶಲಕರ್ಮಿಗಳಿಗೆ ಶೇ.5ರ ಬಡ್ಡಿ ದರದಲ್ಲಿ ₹1 ಲಕ್ಷ ಸಾಲ ಸೌಲಭ್ಯ, ನಂತರ 15 ದಿನಗಳ ಉನ್ನತಮಟ್ಟದ ತರಬೇತಿ ನೀಡಿ, ಮೊದಲು ಪಡೆದ ₹1 ಲಕ್ಷ ಸಾಲ ಮರುಪಾವತಿಯಾದ ನಂತರ ₹2 ಲಕ್ಷ ಸಾಲ ನೀಡಲಾಗುವುದು. ಅಲ್ಲದೇ, ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗಣೇಶ್, ಉಪನಿರ್ದೇಶಕ ವೀರೇಶ್ ನಾಯ್ಕ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ನಗರ ಯೋಜನಾ ನಿರ್ದೇಶಕ ಮನೋಹರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - -

ಬಾಕ್ಸ್‌-1 ಈ ಕುಶಲಕರ್ಮಿಗಳು ನೋಂದಾಯಿಸಬಹುದುಈ ಯೋಜನೆಯಡಿ ಬಡಗಿಗಳು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕುಶಲಕರ್ಮಿಗಳು, ಮೇಸ್ತ್ರಿಗಳು, ದರ್ಜಿಗಳು, ದೋಣಿ ತಯಾರಿಸುವವರು, ದುರಸ್ತಿ ಮತ್ತು ಸೇವೆ ಒದಗಿಸುವ ಅಸಂಘಟಿತ ವಲಯದ ಕುಶಲಕರ್ಮಿಗಳು, ಕಮ್ಮಾರ, ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಿಕೆ, ಬೀಗ ತಯಾರಕರು, ಆಭರಣ ತಯಾರಿಕೆ, ಚರ್ಮಗಾರಿಕೆ, ಹೂ ಮಾಲೆ ತಯಾರಕರು, ದೋಬಿ, ಮೀನಿನ ಬಲೆ ತಯಾರಿಸುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಡಿಸಿ ಹೇಳಿದರು.

- - - ಬಾಕ್ಸ್‌-2 ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಹರು ಹೆಸರು ನೋಂದಾಯಿಸಿಕೊಳ್ಳುವ ಫಲಾನುಭವಿಯು ಸ್ವಯಂ ಉದ್ಯೋಗಿಯಾಗಿದ್ದು, 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ ಓರ್ವರು ಮಾತ್ರ ನೋಂದಾಯಿಸಿಕೊಳ್ಳಬಹುದು. ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು. ಕಳೆದ 5 ವರ್ಷಗಳ ಅವಧಿಯಲ್ಲಿ ಪಿ.ಎಂ. ಇ.ಜಿ.ಪಿ., ಮುದ್ರಾ ಮತ್ತು ಪಿ.ಎಂ. ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಮುದ್ರಾ ಮತ್ತು ಪಿ.ಎಂ.ಸ್ವ-ನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

- - - -13KPSMG04.jpg:

ಶಿವಮೊಗ್ಗ ಡಿಸಿ ಸಭಾಂಗಣದಲ್ಲಿ ಪಿ.ಎಂ.ವಿಶ್ವಕರ್ಮ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಮಾತನಾಡಿದರು.