ವಹ್ನಿಕುಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ

| Published : Oct 01 2024, 01:24 AM IST

ಸಾರಾಂಶ

ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕರಗಕ್ಕೆ ಗೌರವಧನವನ್ನೂ ಸದ್ಯದಲ್ಲೇ ಕೊಡಿಸುವ ಕೆಲಸ ಮಾಡಲಾಗುವುದು. ನೇರವಾಗಿ ಖಾತೆಗಳಿಗೆ ತಲುಪಿಸಲಾಗುವುದು. ಸಮುದಾಯ ಸಂಘಟಿತವಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮಾತಿಗೆ ತಕ್ಕಂತೆ ನಡೆದುಕೊಳ್ಳುವ, ಶಿಸ್ತಿನ ತಿಗಳ ಸಮುದಾಯಕ್ಕೆ ಹಾಸ್ಟೆಲ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಶೀಘ್ರದಲ್ಲಿ ಗುರುತಿಸಿ ಕೊಡಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾ ವಹ್ನಿಕುಲ ಕ್ಷತ್ರಿಯ ಸಂಘದಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರಗಕ್ಕೆ ಗೌರವಧನ:

ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕರಗಕ್ಕೆ ಗೌರವಧನವನ್ನೂ ಸದ್ಯದಲ್ಲೇ ಕೊಡಿಸುವ ಕೆಲಸ ಮಾಡಲಾಗುವುದು. ನೇರವಾಗಿ ಖಾತೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.ಸಮುದಾಯದ ಮುಖಂಡ ಹೂಡಿ ವಿಜಯಕುಮಾರ್ ಮಾತನಾಡಿ, ಸಮುದಾಯಕ್ಕೆ ಸಂಬಂಧಿಸಿದಂತೆ ಜಾಗ ಇಲ್ಲ. ಶಿಕ್ಷಣ ಸಂಸ್ಥೆ ನಿರ್ಮಿಸಲು ಕೋಲಾರದಲ್ಲಿ ಜಾಗ ಬೇಕಿದ್ದು, ಶಾಸಕರು ಭರವಸೆ ನೀಡಿದ್ದಾರೆ. ಅಧ್ಯಕ್ಷ ಉದಯಕುಮಾರ್ ನೇತೃತ್ವದಲ್ಲಿ ನಾಲ್ಕು ಎಕರೆ ಜಾಗವನ್ನಾದರೂ ಪಡೆದುಕೊಳ್ಳಬೇಕು ಎಂದರು.ಪ್ರೋತ್ಸಾಹಧನ ನೀಡಲು ಸಮ್ಮತಿ

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸಮುದಾಯವಿದು, ಕರಗಕ್ಕೆ ಪ್ರೋತ್ಸಾಹಧನ ಕೊಡಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದು, ಇದಕ್ಕಾಗಿ ಪಿ.ಆರ್.ರಮೇಶ್ ಒತ್ತಾಯಿಸಿದ್ದರು ಎಂದು ನೆನಪಿಸಿದ ಅ‍ರವರು, ಸಮಾಜವು ಸಂಘಟಿತರಾದರೆ ಶಕ್ತಿ ಬರುತ್ತದೆ. ಹಳ್ಳಿಯಿಂದ ಬಂದ ಉದಯಕುಮಾರ್ ಹಲವಾರು ಡಾಕ್ಟರ್, ಎಂಜಿನಿಯರ್‌ಗಳನ್ನು ತಯಾರಿಸಿದ್ದಾರೆ. ಇವರೆಲ್ಲಾ ಸಮಾಜಕ್ಕೆ ಸ್ಫೂರ್ತಿ ಎಂದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಉದಯ್‌ಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದೆ, ಸಮಾಜವನ್ನು ಧಾರ್ಮಿಕವಾಗಿ ಬೆಳೆಸಲು ಸ್ವಾಮೀಜಿ ಪ್ರೇರಕ, ಸಮುದಾಯದ ಎಲ್ಲಾ ಮುಖಂಡರು ಒಂದಿಲ್ಲೊಂದು ಸಹಾಯ ಮಾಡುತ್ತಿದ್ದಾರೆ ಎಂದರು.ಮಕ್ಕಳನ್ನೇ ಆಸ್ತಿಯನ್ನಾಗಿಸಿ

ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ತಿಗಳ ಜನಾಂಗದವರು ಆಸ್ತಿ ಮಾಡುತ್ತಾರೆ. ಆದರೆ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಪುರಸ್ಕಾರ ಪಡೆದವರು ಸವಾಲು ಸ್ವೀಕರಿಸಿ ಮುಂದೆ ಸಾಧನೆ ಮಾಡನಬೇಕು. ಮುಂದೆ ಸಮುದಾಯಕ್ಕೆ ಸಹಾಯ ಮಾಡಬೇಕು. ಪ್ರಗತಿದಾಯಕ ಸಮುದಾಯ ಆಗಬೇಕು ಎಂದು ಹೇಳಿದರು.ಶಿವನಾಪುರ ಮಠದ ಪ್ರಣವಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಮುದಾಯದ ವೆಂಕಟೇಶ್, ಎಚ್.ಸುಬ್ಬಣ್ಣ, ಕೃಷ್ಣಮೂರ್ತಿ, ಜಗದೀಶ್, ಹೊಸಕೋಟೆ ಜಯರಾಜ್, ನಾಗರಾಜ್, ಶ್ರೀಧರ್, ರಾಮಮೂರ್ತಿ, ಗಾಯತ್ರಮ್ಮ, ಬಿಡಿಎ ನಾಗಾರಾಜ್, ಶಿವಕುಮಾರ್, ಲೋಕೇಶ್, ಮುಖಂಡರಾದ ಅಫ್ರೋಜ್, ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ಮುನಿಯಪ್ಪ, ಮುರಳಿ ಇದ್ದರು.