ಸಾರಾಂಶ
- ಕೂಡ್ಲಿಗೆರೆ- ಕಮ್ಮಾರಗಟ್ಟೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಶಾಸಕ ಶಾಂತನಗೌಡ ಸಲಹೆ - - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗ್ರಾಮಸ್ಥರು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ, ಚರಂಡಿ ಮುಂತಾದ ಯಾವುದೇ ಸರ್ಕಾರಿ ಕಾಮಗಾರಿಗಳು ಕಳಪೆ ಆಗದಂತೆ ಗಮನಹರಿಸಿಬೇಕು. ಆಗ ಕಳಪೆ ಕಾಮಗಾರಿಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಸಾಮಾನ್ಯವಾಗಿ ಬಹುಪಾಲು ಜನರು ಇದು ಸರ್ಕಾರಿ ಕಾಮಗಾರಿ, ತಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವನೆ ತೋರುತ್ತಾರೆ. ಇದರಿಂದ ಕಾಮಗಾರಿಗಳು ಕಳಪೆಯಾಗುವ ಸಾಧ್ಯತೆ ಇರುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಮಂಗಳವಾರ ತಾಲೂಕಿನ ಬೆನಕನಹಳ್ಳಿ ಸಮೀಪದ ರಾಜ್ಯ ಹೆದ್ದಾರಿ-155 ಕೂಡ್ಲಿಗೆರೆ- ಕಮ್ಮಾರಗಟ್ಟೆ ರಸ್ತೆ ಅಭಿವೃದ್ಧಿಗೆ ₹20 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳು ತುಂಬಾ ಹಾಳಾಗಿವೆ. ಅವುಗಳನ್ನು ಆಧುನೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹20 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ಹೇಳಿದರು.ಕೂಡ್ಲಿಗೆರೆ ಕಮ್ಮಾರಗಟ್ಟೆ ರಸ್ತೆ ಕಿ.ಮೀ. 30.00 ದಿಂದ 35.08 ರವರೆಗೆ 5.80 ಕಿಮೀ ಉದ್ದದ ಹಾಗೂ 25 ಅಡಿ ಅಗಲದ ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಿಸಿ ದ್ವಿಪಥ ರಸ್ತೆ, ಡಾಂಬರೀಕರಣ ಕಾಮಗಾರಿ ಹಾಗೂ ಆಯ್ದ ಭಾಗಗಳಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಗ್ರಾಮೀಣ ಭಾಗದ ರಸ್ತೆಗಳಾದ್ದರಿಂದ ರೈತರ ಟ್ರ್ಯಾಕ್ಟರ್‌ಗಳು, ಕೇಜ್‍ವೀಲ್‌ಗಳು ಹೆಚ್ಚಾಗಿ ಓಡಾಡುತ್ತವೆ. ಪರಿಣಾಮ ರಸ್ತೆಗಳು ಹಾಳಾಗುತ್ತವೆ. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಎಚ್ಚರಿಕೆ ನೀಡಿದ ಶಾಸಕರು, ಈ ಭಾಗದ ರೈತರು ಕೂಡ ರಸ್ತೆ ಹಾಳಾಗದಂತೆ ನೋಡಿಕೊಳ್ಳಬೇಕು. ಆ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಮಾಜಿ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ, ಮುಖಂಡರಾದ ಎಚ್.ಎ. ಉಮಾಪತಿ, ವರದರಾಜಪ್ಪ ಗೌಡ, ಬಿ. ಸಿದ್ದಪ್ಪ, ಎಚ್.ಎ. ಗದ್ದಿಗೇಶ್, ಬೆನಕನಹಳ್ಳಿ ಗಣೇಶ್, ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಸದಸ್ಯರಾದ ಎ.ಜಿ. ಮಹೇಂದ್ರಗೌಡ, ಹಾಲೇಶಪ್ಪ, ಪುಷ್ಪಬಾಯಿ, ರವಿಕುಮಾರ್, ಬೆನಕನಹಳ್ಳಿ ರಂಗಪ್ಪ, ಗಣೇಶ್, ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಶಿವರಾಮ್ ಪ್ರಸಾದ್, ಶಶಿಧರ್, ಗ್ರಾಮಸ್ಥರು ಹಾಜರಿದ್ದರು.
- - - -15ಎಚ್.ಎಲ್.ಐ3:ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಲ್ಲಿ ರಾಜ್ಯ ಹೆದ್ದಾರಿ-115 ಕೂಡ್ಲಿಗೆರೆ ಕಮ್ಮಾರಗಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಜಿ. ಶಾಂತನಗೌಡ ಭೂಮಿಪೂಜೆ ನೆರವೇರಿಸಿದರು.