ಸಾರಾಂಶ
ಕುಮಟಾ: ಅಶಕ್ತ ಕಲಾವಿದರಿಗೆ ನೆರವಾಗುವುದು ನಮ್ಮ ಕರ್ತವ್ಯ. ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಕಲಾವಿದರಿದ್ದಾರೆ. ಕಲಾವಿದರಾಗುವುದು ಎಷ್ಟು ಕಷ್ಟವೋ, ಕಲಾವಿದರ ಜೀವನವೂ ಕಷ್ಟಕರವಾಗುತ್ತಿದೆ. ಕಲೆಯನ್ನೇ ನಂಬಿದವರಿಗೆ ನೆರವಾಗುವ ಮೂಲಕ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಪಟ್ಟಣದ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಲ್ಗಳ್ಳಿಯ ಯಾಜಿ ಯಕ್ಷ ಮಿತ್ರ ಮಂಡಳಿಯ ೧೬ನೇ ವರ್ಷದ ಯಾಜಿ ಯಕ್ಷಮಿತ್ರ ಪ್ರಶಸ್ತಿ ಪ್ರದಾನ, ನಿಧಿ ಸಮರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾರಾಯಣ ಯಾಜಿ ಸಾಲೇಬೈಲು ಮಾತನಾಡಿ, ಯಾಜಿಯವರು ತನ್ನ ಕಲೆಯ ಮೂಲಕ ಗುರುತಿಸಿಕೊಂಡವರು, ಜತೆಗೆ ತಾನು ಸಂಪಾದಿಸಿದ ಹಣವನ್ನು ಅಶಕ್ತರಿಗೆ ನೆರವಾಗಿ ಮಾದರಿ ಬದುಕನ್ನು ಬದುಕುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಯಕ್ಷಗಾನ ಶ್ರೇಷ್ಠ ಕಲೆ. ಅಶಕ್ತ ಕಲಾವಿದರಿಗೆ ನೆರವಾಗುವ ಗುಣ ದೊಡ್ಡದು. ಮಾನವೀಯತೆಯ ಬದುಕು ಜತೆಗಿರುವವರ ಬದುಕನ್ನೂ ಬೆಳಗುತ್ತದೆ. ಬದುಕಿನಲ್ಲಿ ಮಾನವೀಯ ಗುಣ ದೊಡ್ಡದು. ತಮಗಾಗಿ ಬದುಕುವವರೇ ಎಲ್ಲೆಡೆ ತುಂಬಿರುವಾಗ ಕೃಷ್ಣ ಯಾಜಿಯಂಥವರು ತಮ್ಮಂಥ ಕಲಾವಿದರಿಗೆ ನೆರವಾಗುತ್ತಿರುವುದು ಸಾರ್ಥಕದ ಕ್ಷಣ ಎಂದರು.ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ನಾಗೂರು ವಾಸುದೇವ ಐತಾಳ ಮಾತನಾಡಿದರು. ಖ್ಯಾತ ಭಾಗವತ ತ್ರ್ಯಂಬಕ ಹೆಗಡೆ ಇಡುವಾಣಿ ಅವರಿಗೆ ಯಾಜಿ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಿ ನಿಧಿ ಸಮರ್ಪಿಸಲಾಯಿತು. ಸಂಘಟಕ ಬಳ್ಕೂರು ಕೃಷ್ಣ ಯಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಗಾಲ ಚಿದಾನಂದ ಭಂಡಾರಿ ನಿರೂಪಿಸಿದರು. ಅನಂತ ಅಡಿ ವಂದಿಸಿದರು. ನಂತರ ಮೋಕ್ಷ ಸಂಗ್ರಾಮ ಯಕ್ಷಗಾನ ಆಖ್ಯಾನ ಪ್ರದರ್ಶಿಸಲಾಯಿತು. ಗೋಕರ್ಣದಲ್ಲಿ ನಂದಿ ರಥಕ್ಕೆ ಸ್ವಾಗತ
ಗೋಕರ್ಣ: ಬಂಟ್ವಾಳ ತಾಲೂಕಿನ ಬ್ರಹ್ಮಗಿರಿಯ ಗೋಸೇವಾ ಗತಿವಿಧಿ, ರಾಧಾಸುರಭಿ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಂದಿ ರಥ ಯಾತ್ರೆ ಸೋಮವಾರ ಗೋಕರ್ಣಕ್ಕೆ ಆಗಮಿಸಿತು.ರಥಬೀದಿಗೆ ಬಂದ ರಥವನ್ನು ಮಹಾಬಲೇಶ್ವರ ಮಂದಿರದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. ರಥದಲ್ಲಿರುವ ವಿಗ್ರಹ ಹಾಗೂ ಎರಡು ನಂದಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂದಿರದ ಅರ್ಚಕ ವೇ. ಶ್ರೀನಿವಾಸ ಅಡಿ ಪೂಜಾ ಕೈಂಕರ್ಯ ನೆರವೇರಿಸಿದರು. ಈ ವೇಳೆ ಮಂದಿರ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ, ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಡಿ. ೩೧ರಂದು ಪೊಳಲಿಯ ರಾಧಾ ಸುರಭಿ ಗೋಮಂದಿರದಿಂದ ಪ್ರಾರಂಭವಾದ ಈ ನಂದಿ ರಥಯಾತ್ರೆಯು ಗೋಕರ್ಣಕ್ಕೆ ಬಂದಿದ್ದು, ಇಲ್ಲಿಂದ ಯಲ್ಲಾಪುರಕ್ಕೆ ತೆರಳಿ ಅಲ್ಲಿಂದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಾಗಿ ಮಾ. ೨೯ರಂದು ಕದ್ರಿಯಲ್ಲಿ ಕೊನೆಗೊಳ್ಳಲಿದೆ.