ಯುವಕರು ಜವಳಿ, ಕೈಮಗ್ಗ ಉಳಿವು ಸವಾಲಾಗಿ ಸ್ವೀಕರಿಸಲಿ : ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ

| Published : Aug 08 2024, 01:45 AM IST / Updated: Aug 08 2024, 09:29 AM IST

ಸಾರಾಂಶ

 ಕಾರಣಾಂತರಗಳಿಂದ ಕೈಮಗ್ಗದಲ್ಲಿ ಆದಾಯ ಕುಸಿದು, ಕೈಮಗ್ಗ ನಿಂತು 25 ಸಾವಿರಗಳಿದ್ದ ಕೈಮಗ್ಗಗಳು ಕೇವಲ 3 ಸಾವಿರಕ್ಕೆ ಕುಸಿದಿವೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಗದಗ: ಕೈ ಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜವಳಿ ಮತ್ತು ಕೈ ಮಗ್ಗ ಉಳಿಸುವುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ನಗರದ ನರಸಾಪುರದಲ್ಲಿರುವ ಕರ್ನಾಟಕ ಕೈ ಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಬುಧವಾರ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಬೆಟಗೇರಿಯಲ್ಲಿ ಸ್ಥಾಪನೆಯಾಗಲೂ ಮೂಲ ಕಾರಣ ಸ್ಥಳೀಯ ನೇಕಾರರು. ಅಂದಿನ ಸರ್ಕಾರ ರಾಷ್ಟ್ರದಲ್ಲಿ ಉತ್ತಮ ಜವಳಿ ನೀತಿ ಮಾಡಿ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿತು. ಅದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ಏಕೈಕ ಕೈಮಗ್ಗ ಸಂಸ್ಥೆ ಗದಗ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು ಎಂದರು.

ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮೊದಲು ಕುಣಿಮಗ್ಗದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಕೈಮಗ್ಗದ ಇತಿಹಾಸ ಪ್ರಾರಂಭ ಆಗುವುದೇ ಕುಣಿ ಮಗ್ಗದಿಂದ. ಹಾಗಾಗಿ ತರಬೇತಿದಾರರು ನೇಕಾರರ ಮನೆಗೆ ಹೋಗಿ ಕುಣಿ ಮಗ್ಗ ನೋಡಬೇಕು ಎಂದು ತಿಳಿಸಿದರು.

ಬೆಟಗೇರಿಯ ನೇಕಾರರ ಕೈಮಗ್ಗದ ಉತ್ಪಾದನೆಗಳು ಸಂಪೂರ್ಣವಾಗಿ ವಿದೇಶಕ್ಕೆ ರಪ್ತು ಅಗುತ್ತಿದ್ದವು. ನೇಕಾರಿಕೆ ಕೈತುಂಬಾ ಸಂಬಳ, ಪ್ರತಿದಿನ ಕೆಲಸವಿತ್ತು. ಕಾರಣಾಂತರಗಳಿಂದ ಕೈಮಗ್ಗದಲ್ಲಿ ಆದಾಯ ಕುಸಿದು, ಕೈಮಗ್ಗ ನಿಂತು 25 ಸಾವಿರಗಳಿದ್ದ ಕೈಮಗ್ಗಗಳು ಕೇವಲ 3 ಸಾವಿರಕ್ಕೆ ಕುಸಿದಿವೆ. ಹೀಗೆ ಮುಂದುವರಿದರೆ ಕೈಮಗ್ಗ ಉಳಿಯುವುದು ಕಷ್ಟಕಾರಕ ಎಂದು ಆತಂಕ ವ್ಯಕ್ತಪಡಿಸಿದರು.

ಕೈಮಗ್ಗದಲ್ಲಿ ಉತ್ಪಾದನೆ ಮಾಡಿದ ಬಟ್ಟೆಯ ಹಾಗೇ ಬೇರೆ ಯಾವುದೇ ರೀತಿಯ ಯಂತ್ರಗಳಿಂದ ತಯಾರಿಸಿದರೆ ಅಂತಹ ಉತ್ತಮ ಗುಣಮಟ್ಟ ಇರುವುದಿಲ್ಲ. ಅತಿದೊಡ್ಡ ಉದ್ಯೋಗ ನೀಡುವ ಕೈಮಗ್ಗ ಕ್ಷೇತ್ರ ಎಲ್ಲರ ನಿರ್ಲಕ್ಷ್ಯದಿಂದ ಕೊನೆ ಹಂತದ ಅಂಚಿಗೆ ಬಂದು ತಲುಪಿದೆ. ಕೈಮಗ್ಗ ಸಂಸ್ಥೆಯ ತರಬೇತಿಗಾರರಿಗೆ ಮತ್ತು ಬೋಧಕ ವರ್ಗದವರಿಗೆ ಕೈಮಗ್ಗ ಉಳಿವು ಸವಾಲಾಗಿದೆ. ಪ್ರರಿಶ್ರಮದಿಂದ ಕೈಮಗ್ಗ ಉಳಿಸುವ ಕಾರ್ಯವಾಗಬೇಕು ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, 1905ರಲ್ಲಿ ಆರಂಭವಾದ ಸ್ವದೇಶಿ ಚಳವಳಿಯ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಣೆ ಮಾಡಲು ನಿರ್ಧರಿಸಿತು. ಬ್ರಿಟಿಷ್ ಸರ್ಕಾರದ ಬಂಗಾಳ ವಿಭಜನೆಯ ವಿರುದ್ಧ ಪ್ರತಿಭಟನೆಗಾಗಿ ಕೋಲ್ಕತ್ತಾದ ಟೌನ್ ಹಾಲ್‌ನಲ್ಲಿ ಸ್ವದೇಶಿ ಚಳವಳಿ ಆರಂಭವಾಯಿತು. ಈ ಚಳವಳಿಯ ಮುಖ್ಯ ಉದ್ದೇಶ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದಾಗಿತ್ತು ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದಾಗಿತ್ತು. ಸ್ವದೇಶಿ ಚಳವಳಿಯ ಸವಿನೆನಪಿಗಾಗಿ ಕೈಮಗ್ಗ ದಿನಾಚರಣೆ ಮಾಡಲಾಯಿತು ಎಂದರು.

ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮನಸ್ಥಿತಿ ಎಲ್ಲರಲ್ಲಿ ಬಂದಾಗ ಮಾತ್ರವೇ ಕೈಮಗ್ಗ ಉಳಿಯುತ್ತದೆ. ಕೈ ಮಗ್ಗ ತಂತ್ರಜ್ಞಾನ ಸಂಸ್ಥೆಯ ಕುರಿತು ವ್ಯಾಪಕವಾಗಿ ಪ್ರಚಾರವಾಗಬೇಕು. ಇಂತಹ ಸಂಸ್ಥೆ ಗದಗ ಜಿಲ್ಲೆಯಲ್ಲಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೈ ಮಗ್ಗ ನೇಕಾರರಿಗೆ ಸನ್ಮಾನಿಸಲಾಯಿತು.

ಕೈ ಮಗ್ಗ ಸಲಹೆಗಾರರಾದ ವೃಂದ ಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ, ಕೈಗಾರಿಕಾ ನೇಕಾರ ಸಂಘದ ಅಧ್ಯಕ್ಷ ಅಶೋಕ ಬಣ್ಣದ, ಜಿಲ್ಲಾ ಜವಳಿ ಉತ್ಪಾದಕರ ಸಂಘದ ಅಧ್ಯಕ್ಷ ಅನಿಲ ಎಸ್. ಗಡ್ಡಿ, ಕೆಎಸ್‌ಟಿಐಡಿಸಿಎಲ್ ಮಾಜಿ ನಿರ್ದೇಶಕ ಶಿವಕುಮಾರ ಪಾಟೀಲ, ಮಲ್ಲಿಕಾರ್ಜುನ ಬೆಲ್ಲದ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಇದ್ದರು.