ಯುವಜನತೆ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಲಿ

| Published : Nov 07 2025, 03:15 AM IST

ಸಾರಾಂಶ

ಯುವಜನತೆ ಶರಣರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಬೇಕು. ಅಂದಾಗ ಮಾತ್ರ ಆರೋಗ್ಯ ಪೂರ್ಣ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಇಂದಿನ ಸಮಾಜ ಅದರಲ್ಲೂ ಹೆಚ್ಚಾಗಿ ಯುವಜನತೆ ಶರಣರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಬೇಕು. ಅಂದಾಗ ಮಾತ್ರ ಆರೋಗ್ಯ ಪೂರ್ಣ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮತಕ್ಷೇತ್ರದ ಉಸ್ತುವಾರಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.ತಾಲೂಕಿನ ದೇವೂರ ಗ್ರಾಮದ ಬಸವೇಶ್ವರ ದೇವಸ್ಥಾನದ ನೂತನ ಶಿಖರದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶರಣರ ಸಂದೇಶದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂದೇಶವಿದೆ. ಇಂದು ಮನುಷ್ಯ- ಮನುಷ್ಯರ ನಡುವಿನ ಪ್ರೀತಿ ನಂಬಿಕೆಗಳೇ ದೂರವಾಗುತ್ತಿರುವುದು ವಿಷಾದಕರ ಸಂಗತಿ. ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸಲು ಕಾಯಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಪ್ರತಿಯೊಬ್ಬರು ಅವರ ಧರ್ಮವನ್ನು ಆರಾಧಿಸಿ ಬೇರೊಬ್ಬರ ಧರ್ಮವನ್ನು ಪ್ರೀತಿಸಬೇಕು. ಸರ್ವ ಸಮಾಜದ ಬಂಧುಗಳು ಕೂಡಿ ಧಾರ್ಮಿಕ ಕಾರ್ಯಗಳನ್ನು ಆಚರಿಸುವುದರಿಂದ ಸಮಾಜಕ್ಕೆ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಮೂಲಕ ಕಾಯಕ ಜೀವಿಗಳ ಆಗೋಣ. ಜಾತ್ಯತೀತವಾಗಿ ಗ್ರಾಮದ ಯಾವುದೇ ಕಾರ್ಯಕ್ರಮಕ್ಕೆ ನನ್ನ ಸಹಾಯ, ಸಹಕಾರ ಇದ್ದೇ ಇರುತ್ತದೆ. ದೇವಸ್ಥಾನದ ಶಿಖರ ನಿರ್ಮಾಣಕ್ಕೆ ಸಹಾಯಧನ ನೀಡುವುದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸೀರ ಅಹ್ಮದ್ ಬೇಪಾರಿ ಮಾತನಾಡಿ, ಡಾ.ಪ್ರಭುಗೌಡ ಅವರು ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾಗಿ ಸುಮಾರು 50 ಸಾವಿರ ಜನ ದೃಷ್ಟಿ ಹೀನರಿಗೆ ದೃಷ್ಟಿ ನೀಡಿದ್ದಾರೆ. ಕ್ಷೇತ್ರದ ಉಸ್ತುವಾರಿಗಳಾಗಿ ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರೂ ಕ್ಷೇತ್ರದ ಜನತೆಗೆ ಸಹಾಯ ಹಸ್ತ ನೀಡುವ ಮೂಲಕ ಜನಮಾನಸದಲ್ಲಿದ್ದಾರೆ. ಬರುವಂತ ದಿನಗಳಲ್ಲಿ ನಾವೆಲ್ಲರೂ ಅವರ ಕೈ ಬಲಪಡಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿಯಾದ ಮಯೂರ ಕೆ.ರಾಠೋಡ, ಉಪಾಧ್ಯಕ್ಷರಾದ ಅಂಬಣ್ಣ ಆನೆಗುಂದಿ, ಸದಸ್ಯರಾದ ಅಬ್ಬಾಸಾಲಿ ಬಾಗವಾನ, ನಿವೃತ್ತ ಪ್ರಾಧ್ಯಾಪಕರಾದ ಎಸ್. ಎನ್.ಬಸವರೆಡ್ಡಿ, ಸಿದ್ದನಗೌಡ ಬಿರಾದಾರ, ಸಂಗನಗೌಡ ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.