ಸಾರಾಂಶ
ಕಾರವಾರ: ನಗರದಲ್ಲಿ 17ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 5 ಕಿಮೀ ಮ್ಯಾರಥಾನ- ರೆಡ್ ರಿಬ್ಬನ್ ಓಟದ ಸ್ಪರ್ಧೆಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಚಾಲನೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಹರ್ಷ ವೆಂಕಟೇಶ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಯುವಜನತೆಯಲ್ಲಿ ಎಚ್‌ಐವಿ, ಏಡ್ಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮ್ಯಾರಥಾನ್ ಸ್ಪರ್ಧೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವ ಜನತೆಯಲ್ಲಿ ಡ್ರಗ್ಸ್, ಮಾದಕವಸ್ತು ಮತ್ತು ಅಸುರಕ್ಷಿತ ಲೈಂಗಿಕತೆಯಿಂದ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವಜನತೆ ಎಚ್‌ಐವಿ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇದರ ಬಗ್ಗೆ ಮಾತನಾಡಲು ಯಾವುದೇ ಮುಜುಗರ ಬೇಡ ಎಂದರು.ಬಾಲಕರ ವಿಭಾಗದಲ್ಲಿ ಸಿದ್ದಾಪುರದ ಪ್ರಥಮದರ್ಜೆ ಕಾಲೇಜಿನ ಪ್ರಜ್ವಲ್ ಸಿ. ನಾಯ್ಕ ಪ್ರಥಮ, ಕಾರವಾರದ ಶಿವಾಜಿ ಕಾಲೇಜು ಬಾಡ ವಿದ್ಯಾರ್ಥಿ ಜೋಸೆಫ್ ಎಲ್. ಸಿದ್ಧಿ ದ್ವಿತೀಯ ಸ್ಥಾನ, ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನ ಮನೀಶ ಎಚ್. ನಾಯಕ್ ತೃತೀಯ ಸ್ಥಾನ ಪಡೆದರು. ಸಮಾಧಾನಕರ ಬಹುಮಾನವನ್ನು ಕಾರ್ತಿಕ ಸಂತೋಷ್ ನಾಯ್ಕ, ವಿನಾಯಕ ನಾಯ್ಕ, ಗುರುನಾಥ ಎಸ್., ಪ್ರಜ್ವಲ್ ಆರ್.ಡಿ. ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಶಿರಸಿಯ ಪ್ರಥಮದರ್ಜೆ ಕಾಲೇಜಿನ ಪೂಜಾ ಪಿ. ನಾಯ್ಕ ಪ್ರಥಮ ಸ್ಥಾನ, ಕಾರವಾರದ ಮಹಾಸತಿ ಕಾಲೇಜಿನ ವಿದ್ಯಾರ್ಥಿ ಆರ್.ವೈ. ನಮಿತಾ ದ್ವಿತೀಯ ಸ್ಥಾನ, ಬಿಂದು ಎಸ್. ಹಿರೇಮಠ ತೃತೀಯ ಸ್ಥಾನ ಪಡೆದರು. ಸಮಾಧಾನಕರ ಬಹುಮಾನವನ್ನು ಪೂರ್ವಿ ಹರಿಕಂತ್ರ, ಚಂದ್ರಿಕಾ ಸುಧಾಕರ ಗೌಡ, ಸಿಂಧೂ ಸಿ. ಹುಲಸ್ವಾರ, ಪುಷ್ಪಾ ಮೊಗೇರ ಗಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ.ವಿ. ನೀರಜ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ, ಶಿವಾಜಿ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ನವೀನ ದೇವರಬಾವಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು. ಮ್ಯಾರಥಾನ್ ಸ್ಪರ್ಧೆಯ ಸಂಪೂರ್ಣ ನಿರ್ವಹಣೆಯನ್ನು ಮುಖ್ಯ ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ ನಿರ್ವಹಿಸಿದರು.