ಪರಿಸರ ಉಳಿಸಲು ಯುವಶಕ್ತಿ ಮುಂದಾಗಲಿ: ಸಾಮಾಜಿಕ ಚಿಂತಕ ವಿವೇಕಾನಂದ

| Published : Jun 10 2024, 12:49 AM IST

ಪರಿಸರ ಉಳಿಸಲು ಯುವಶಕ್ತಿ ಮುಂದಾಗಲಿ: ಸಾಮಾಜಿಕ ಚಿಂತಕ ವಿವೇಕಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಸಂಸ್ಕೃತಿ ಮರೆಯಾಗಿ, ಗ್ರಾಹಕ ಸಂಸ್ಕೃತಿ ಎಲ್ಲೆಡೆ ರಾರಾಜಿಸುತ್ತಿದೆ. ಜೂಜಾಟ, ರಾಸಾಯನಿಕ ಪಾನೀಯಗಳ ಕುರಿತು ಜಾಹೀರಾತು ನೀಡುವ ನಮ್ಮ ಸಿನಿಮಾ ನಟರು, ದೇಹಕ್ಕೆ ಅವಶ್ಯಕವಾಗಿರುವ ಎಳನೀರು ಹಾಗೂ ಕಬ್ಬಿನಹಾಲಿನ ಬಗ್ಗೆ ಜಾಹೀರಾತು ನೀಡುವುದಿಲ್ಲ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಾವು ಸೇವಿಸುವ ಗಾಳಿಯಿಂದ ಹಿಡಿದು ತಿನ್ನುವ ಆಹಾರದವರೆಗೂ ಎಲ್ಲವೂ ವಿಷಯುಕ್ತವಾಗುತ್ತಿದೆ. ಇನ್ನಾದರೂ ನಮ್ಮ ಪರಿಸರವನ್ನು ಕಾಪಾಡಿಕೊಳ್ಳಲು ಯುವಶಕ್ತಿ ಮುಂದಾಗದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಅನುಭವಿಸಬೇಕಾಗುತ್ತದೆ ಎಂದು ಸಾಮಾಜಿಕ ಚಿಂತಕ ಎಚ್.ಕೆ.ವಿವೇಕಾನಂದ ಬೇಸರ ವ್ಯಕ್ತಪಡಿಸಿದರು.

ದಿ. ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಗವಾರದ ಸಾರ್ವಜನಿಕ ಸಂಯುಕ್ತ ಪದವಿ ಪೂರ್ವ ಕಾಲೇಜು ( ಪ್ರೌಢಶಾಲೆ ವಿಭಾಗ) ಕೆಂಭಾರೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಸಂಸ್ಕೃತಿ ಮರೆಯಾಗಿ, ಗ್ರಾಹಕ ಸಂಸ್ಕೃತಿ ಎಲ್ಲೆಡೆ ರಾರಾಜಿಸುತ್ತಿದೆ. ಜೂಜಾಟ, ರಾಸಾಯನಿಕ ಪಾನೀಯಗಳ ಕುರಿತು ಜಾಹೀರಾತು ನೀಡುವ ನಮ್ಮ ಸಿನಿಮಾ ನಟರು, ದೇಹಕ್ಕೆ ಅವಶ್ಯಕವಾಗಿರುವ ಎಳನೀರು ಹಾಗೂ ಕಬ್ಬಿನಹಾಲಿನ ಬಗ್ಗೆ ಜಾಹೀರಾತು ನೀಡುವುದಿಲ್ಲ. ಇದು ನಮ್ಮ ದೇಶದ ದುರಂತ. ವಿದ್ಯಾರ್ಥಿಗಳು ಹಾಗೂ ಯುವಸಮೂಹ ಜಾಗೃತಗೊಂಡು ಬಹು ಅಮೂಲ್ಯವಾದ ನಮ್ಮ ಪರಿಸರವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪರಿಸರದ ಮಹತ್ವವನ್ನು ಅರಿತುಕೊಳ್ಳಲು ವಿಫಲವಾಗಿರುವುದು ಹಾಗೂ ಜಾಗೃತಿ ಇಲ್ಲದ ಕಾರಣ ನಮ್ಮ ಪರಿಸರ ಸಾಕಷ್ಟು ಹಾಳಾಗುತ್ತಿದೆ. ಇಂದಿನ ಯುವಶಕ್ತಿಯೇ ದೇಶದ ಭವಿಷ್ಯವಾಗಿದ್ದು, ನೀವು ಪರಿಸರ ಬೆಳೆಸುವ ಹಾಗೂ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲವಾದರೆ, ಮುಂದೆ ಸಾಕಷ್ಟು ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಲಿವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್.ಶಂಭೂಗೌಡ ಮಾತನಾಡಿ, ಮನುಷ್ಯ ನೀರು ಹಾಗೂ ಆಹಾರವಿಲ್ಲದೇ ಕೆಲಕಾಲ ಜೀವಿಸಬಹುದು. ಆದರೆ, ಗಾಳಿ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ. ನಗರೀಕರಣ ಸೇರಿ ನಾನಾ ಕಾರಣಗಳಿಂದ ನಮ್ಮ ಪರಿಸರ ನಾಶವಾಗುತ್ತಿದೆ. ಇದು ಮುಂದುವರಿದರೆ, ಭವಿಷ್ಯ ಚಿಂತಾಜನಕವಾಗಲಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳು ತಮ್ಮ ಶಾಲಾ ಆವರಣದಲ್ಲಿ ನೆಟ್ಟಿರುವ ಗಿಡಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎನ್. ಆದರ್ಶ ಕುಮಾರ್ ಮಾತನಾಡಿ, ನಮ್ಮ ತಂದೆಯ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು ಎಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಿದ್ದೇವೆ. ಇದರ ಮೂಲಕ ನಾನಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಯುವಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಷ್ಠಾನ ನಿರಂತರ ಕಾರ್ಯಕ್ರಮ ರೂಪಿಸಲಿದೆ ಎಂದರು.

ಕಾರ್ಯಕ್ರಮದ ಪ್ರಯುಕ್ತ ಶಾಲೆಯ ಆವರಣದಲ್ಲಿ ನಾನಾ ಜಾತಿಗೆ ಹಣ್ಣಿನ ಗಿಡಗಳನ್ನು ನೆಡುವುದರೊಂದಿಗೆ ಜನರಿಗೆ ವಿತರಿಸಲಾಯಿತು. ಪ್ರತಿಷ್ಠಾನದ ಉಪಾಧ್ಯಕ್ಷ ಕೂ.ಗಿ.ಗಿರಿಯಪ್ಪ, ಸಂಸ್ಥೆಯ ಉಪಾಧ್ಯಕ್ಷ ನಾಗವಾರ ಕೆಂಚೇಗೌಡ, ಮುಖ್ಯಶಿಕ್ಷಕ ಜಿ.ಡಿ.ಜಯರಾಂ, ಪ್ರತಿಷ್ಠಾನದ ವಕೀಲ ಆಶೋಕ್, ಪೊಲೀಸ್ ರಾಮೇಗೌಡ, ಕಾಲೇಜು ಪ್ರಾಂಶುಪಾಲ ಇಂದ್ರಕುಮಾರ್, ಶಿಕ್ಷಕಿಯರಾದ ರಂಜಿತ, ಲಾವಣ್ಯ ಸೇರಿ ಹಲವರು ಇದ್ದರು.