ಮಳೆ ಬಂದ್ರೆ ಮಕ್ಕಳಿಗೆ, ಪಾಲಕರಿಗೆ ತಪ್ಪದ ಭಯ!

| Published : Jun 10 2024, 12:49 AM IST

ಮಳೆ ಬಂದ್ರೆ ಮಕ್ಕಳಿಗೆ, ಪಾಲಕರಿಗೆ ತಪ್ಪದ ಭಯ!
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೊಪ್ಪ ಎಸ್.ಕೆ ಗ್ರಾಮದ ಲಕ್ಷ್ಮೀ ನಗರ ವಿದ್ಯಾರ್ಥಿಗಳಿಗೆ ಸತ್ಯಮ್ಮನ ಹಳ್ಳ ಭಯ ಉಂಟಾಗುತ್ತದೆ.

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ಮಳೆ ಬಂದರೆ ಶಾಲೆಗೆ ಹೋಗಲು ಮಕ್ಕಳು ಭಯಪಟ್ಟರೆ, ಶಾಲೆಗೆ ಹೋದಾಗ ಮಳೆ ಬಂದರೆ ಮನೆಯಲ್ಲಿನ ಪಾಲಕರು ಭಯಪಡುವಂತ ಪರಿಸ್ಥಿತಿ ಇದೆ. ಕಾರಣ ಹಳ್ಳದ ಭಯ.

ರಾಮದುರ್ಗ ತಾಲೂಕಿನ ಕಟ್ಟಕಡೆಯ ಚಿಕ್ಕೋಪ್ಪ ಎಸ್.ಕೆ ಗ್ರಾಮದಲ್ಲಿನ ಉಡಚಮ್ಮನಗರದ ಉಪನಗರವಾದ ಲಕ್ಷ್ಮೀ ನಗರದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಳೆಗಾಲ ಬಂದರೆ ಭಯ ಶುರುವಾಗುತ್ತದೆ. ಜೀವ ಭಯದಲ್ಲಿ ಮಕ್ಕಳು ಶಾಲೆಗೆ ತೆರಳಿದರೆ, ಶಾಲೆಯಿಂದ ಮರಳಿ ಬರುವವರೆಗೆ ಪಾಲಕರು ಉಸಿರು ಬಿಗಿ ಹಿಡಿಯುತ್ತಾರೆ. ಪ್ರತಿ ಬಾರಿಯೂ ಈ ಪರಿಸ್ಥಿತಿ ಇದೆ. ಆದರೆ, ಸರಿಯಾದ ಪರಿಹಾರ, ಮಾರ್ಗೋಪಾಯ ಮಾತ್ರ ಸಿಕ್ಕಿಲ್ಲ.

ಸಂಗಳ ಗ್ರಾಪಂ ವ್ಯಾಪ್ತಿಗೆ ಸಂಗಳ, ಕಲಹಾಳ ಸೇರಿದಂತೆ ಚಿಕ್ಕೋಪ್ಪ ಎಸ್.ಕೆ ಗ್ರಾಮ ಬರುತ್ತದೆ. ತಾಲೂಕಿನ ಕೊನೆ ಗ್ರಾಮವಾದ ಚಿಕ್ಕೋಪ್ಪ ಎಸ್‌.ಕೆಗೆ ಸೇರಿದ ಉಡಚಮ್ಮನಗರದಿಂದ ಸುಮಾರು 2 ಕಿಮೀ ಅಂತರದಲ್ಲಿ ಉಪನಗರವಾದ ಲಕ್ಷ್ಮೀನಗರವಿದೆ. ಅಲ್ಲಿ ಸುಮಾರು 30ಕ್ಕೂ ಕುಟುಂಬಗಳು ವಾಸವಾಗಿವೆ. ಇಲ್ಲಿರುವ 25ಕ್ಕೂ ವಿದ್ಯಾರ್ಥಿಗಳು ಶಾಲೆಗೆಂದು ಉಡಚಮ್ಮನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ನಿತ್ಯ ಕಾಲ್ನಡಿಗೆಯಲ್ಲಿಯೇ ಹೋಗಿ ಬರಬೇಕು. ಈ ನಗರಗಳ ಮಧ್ಯ ಬರುವ ಸತ್ಯಮ್ಮನ ಹಳ್ಳ ದಾಟಲು ಯಾವುದೇ ಕಿರು ಸೇತುವೆ ಇಲ್ಲ. ಹೀಗಾಗಿ ಹಳ್ಳದಲ್ಲಿ ಇಳಿದುಕೊಂಡೇ ಸಾಗಬೇಕು. ಮಳೆಗಾಲ ಹೊರತುಪಡಿಸಿದರೆ ಗ್ರಾಮೀಣ ಮಕ್ಕಳಿಗೆ 2 ಕಿಮೀ ನಡುಗೆ ಸರಳವಾಗಿದೆ. ಆದರೆ, ಮಳೆಗಾಲ ಬಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕಾಗುತ್ತದೆ. ಮಳೆಯಾದರೆ ಸತ್ಯಮ್ಮನ ಹಳ್ಳ ಉಕ್ಕಿಹರಿಯುತ್ತದೆ. ಹೀಗಾಗಿ ಹಳ್ಳ ದಾಟುವುದು ಅಪಾಯಕಾರಿಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸರ್ಕಾರ ಲಕ್ಷ್ಮೀ ನಗರದಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹಾಗೆಯೇ ಮೂಲಭೂತ ಸೌಕರ್ಯಗಳಾದ ಶುದ್ಧ ನೀರು ಹಾಗೂ ಅಗತ್ಯ ಸೌಕರ್ಯಗಳನ್ನು ನೀಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆ ಬಂದಾಗಲೆಲ್ಲ ಪಾಲಕರು ಹಳ್ಳದ ದಂಡೆಗೆ:

ಮಕ್ಕಳು ಶಾಲೆ ಹೋದಾಗ ಮಳೆ ಬಂದರೆ ಪಾಲಕರು ಹಳ್ಳದ ದಂಡೆಗೆ ಬಂದು ನಿಲ್ಲುತ್ತಾರೆ. ಮಳೆಗೆ ಹಳ್ಳ ತುಂಬಿ ಹರಿದರೆ ಮಕ್ಕಳು ರಭಸವಾಗಿ ಹರಿಯುವ ನೀರನ್ನು ದಾಟಿಕೊಂಡೇ ಬರಬೇಕು. ಈ ವೇಳೆ ಏನಾದರೂ ಮಕ್ಕಳಿಗೆ ಅನಾಹುತವಾದರೆ ಎಂಬ ಭಯದಿಂದ ಮಳೆಯಾದರೇ ಹಳ್ಳದ ದಂಡಿಯಲ್ಲಿ ನಿಂತು ಮಕ್ಕಳ ಕೈಯನ್ನು ಒಬ್ಬರಿಗೊಬ್ಬರು ಹಿಡಿದುಕೊಂಡೇ ದಾಟಿಸಿಕೊಂಡು ಬರುತ್ತಾರೆ ಪೋಷಕರು. ಇದು ಇಲ್ಲಿ ಸಾಮಾನ್ಯ ಎನಿಸಿದರೂ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

-----------

ಸೌಲಭ್ಯಕ್ಕಾಗಿ ಚುನಾವಣೆ ಬಹಿಷ್ಕರಿಸಿ ಎಚ್ಚರಿಸಿದ್ದ ಗ್ರಾಮಸ್ಥರು

ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡ ಉಡಚಮ್ಮನಗರ ಮತ್ತು ಲಕ್ಷ್ಮೀ ನಗರದ ನಿವಾಸಿಗಳು ಇದೇ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಶುದ್ಧ ಕುಡಿಯುವ ನೀರು, ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸುವ ತಾಲೂಕು ಆಡಳಿತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ನಂತರ ಬಹಿಷ್ಕಾರ ಹಿಂದಕ್ಕೆ ಪಡೆದಿದ್ದಾರೆ. ಆದರೆ ಸದ್ಯ ಚುನಾವಣೆಯ ಫಲಿತಾಂಶ ಬಂದಿದ್ದು, ಭರವಸೆಯಂತೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಮುಂದಾಗುವರೇ ಕಾದು ನೋಡಬೇಕಾಗಿದೆ.

------ಉಡಚಮ್ಮನಗರದ ಮತ್ತು ಲಕ್ಷ್ಮೀ ನಗರದ ಮಧ್ಯ ಬರುವ ಸತ್ಯಮ್ಮನ ಹಳ್ಳಕ್ಕೆ ನರೇಗಾ ಯೋಜನೆಯಲ್ಲಿ ಬಾಂದಾರ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಿದ್ದು, ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭಿಸುತ್ತೇವೆ.

-ಬಸವರಾಜ ಐನಾಪೂರ, ಇಒ ತಾಪಂ ರಾಮದುರ್ಗ.

-------

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಿದ್ದ ಶಾಸಕ ಅಶೋಕ ಪಟ್ಟಣ ಅವರಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು ವರ್ಷವಾದರೂ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮುನ್ಸೂಚನೆ ಇರದೇ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದೇವು. ತಾಲೂಕು ಆಡಳಿತ ಸೂಕ್ತ ಭರವಸೆ ನೀಡಿದ್ದರಿಂದ ಬಹಿಷ್ಕಾರ ಹಿಂಪಡೆಯಲಾಗಿದೆ. ಇನ್ನು ಸ್ವಲ್ಪ ದಿನ ನೋಡಿ ಹೋರಾಟದ ಹಾದಿ ಹಿಡಿಯಲು ಗ್ರಾಮಸ್ಥರು ನಿರ್ಧರಿಸಿದ್ದೇವೆ.

-ದೊಡ್ಡವ್ವ ಬಸಪ್ಪ ಬಾಗಲಿ, ಗ್ರಾಮ ಪಂಚಾಯತಿ ಸದಸ್ಯರು.

-------

ಮಳೆಗಾಲ ಬಂದರೇ, ಸತ್ಯಮ್ಮನ ಹಳ್ಳಕ್ಕೆ ನೀರು ಬಂದರೇ ಶಾಲೆಗೆ ಹೋದ ಮಕ್ಕಳು ಮನೆಗೆ ಯಾವಾಗ ಬರುತ್ತಾರೆಂದು ಗಾಬರಿಯಲ್ಲಿ ಪಾಲಕರು ಇರುತ್ತಾರೆ. ರೈತರು ಕೂಡಾ ಜಮೀನುಗಳಿಗೆ ಹೋಗಿ ಮರಳಿ ಬರುವುದು, ಜಾನುವಾರು ಸಹಿತ ಮನೆ ತಲುಪುವುದು ಕಷ್ಟಕರವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಳ್ಳಕ್ಕೆ ಸೇತುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.

-ನಾಗಪ್ಪ ಅಡಗಲ್, ಲಕ್ಷ್ಮೀ ನಗರ (ಉಡಚಮ್ಮನಗರ) ನಿವಾಸಿ.