ಸಾರಾಂಶ
ಹುಬ್ಬಳ್ಳಿ: ಯುವಜನತೆ ಹೆಚ್ಚು ಉದ್ಯಮಗಳಲ್ಲಿ ತೊಡಗಬೇಕಿದೆ. ಉದ್ಯಮ ಆರಂಭಿಸುವಾಗ ಹಿಂಜರಿಕೆ ಸರಿಯಲ್ಲ. ಹತ್ತು-ಹಲವು ಪಾಠಗಳಿಂದಲೇ ಹೊಸದೊಂದನ್ನು ಕಲಿಯಲು ಇಲ್ಲಿ ಸಾಧ್ಯವಾಗುತ್ತದೆ ಎಂದು ದೇಶಪಾಂಡೆ ಫೌಂಡೇಶನ್‌ನ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು.
ಶುಕ್ರವಾರ ಇಲ್ಲಿನ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್‌ನ ಸ್ಟಾರ್ಟ್‌ಅಪ್ ಆವರಣದಲ್ಲಿ ಏರ್ಪಡಿಸಿದ್ದ ಸ್ಟಾರ್ಟ್‌ಅಪ್ ಡೈಲಾಗ್-2024 ನಲ್ಲಿ ಭಾಗವಹಿಸಿ ಮಾತನಾಡಿದರು.ಸ್ಟಾರ್ಟ್ ಅಪ್ ಆರಂಭಿಸುವವರಿಗೆ ಸಂಘಟಿತ ಪ್ರಯತ್ನ ಬೇಕು. ಶ್ರದ್ಧೆ, ತಾಳ್ಮೆ ಇರಬೇಕು. ಎಂಥ ಉದ್ಯಮವಾದರೂ ಆರಂಭದಲ್ಲಿ ಚಿಕ್ಕದಾಗಿಯೇ ಇತ್ತು ಎನ್ನುವ ಅರಿವಿರಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯವಾಗಲಿದೆ. ಜಾಗತಿಕ ಮಟ್ಟದಲ್ಲಿ ಉದ್ಯಮಶೀಲತೆಗೆ ಬಹಳ ಆದ್ಯತೆ ನೀಡಲಾಗುತ್ತಿದೆ. ಇದು ನಗರ ಪ್ರದೇಶಕ್ಕೆ ಸೀಮಿತವಾದೆ ಗ್ರಾಮೀಣ ಪ್ರದೇಶಕ್ಕೂ ಪಸರಿಸುವಂತಾಗಲಿ. ನವೋದ್ಯಮ ಆರಂಭಿಸಿದಾಗ ಹಲವಾರು ಸಮಸ್ಯೆಗಳು ಎದುರಾಗುವುದು ಸಹಜ. ಪರಿಹಾರ ಹುಡುಕಾಟದಲ್ಲಿ ತೊಡಗುವ, ಉತ್ಸುಕತೆ ತೋರುವ ಮನೋಭಾವವೇ ನಿಜವಾದ ಉದ್ಯಮಶೀಲತೆ ಎಂದರು.
ಜಗತ್ತಿನಲ್ಲಿ ಮೂರು ತೆರನಾದ ಜನರಿದ್ದಾರೆ. ಸಮಸ್ಯೆಗಳ ಜತೆ ಬದುಕುವವರ ಗುಂಪು ಒಂದು, ಸಮಸ್ಯೆಗಳ ಬಗ್ಗೆ ಸದಾ ದೂರುತ್ತಲೇ ಇರುವವರದು ಇನ್ನೊಂದು. ಇವರಿಗಿಂತ ಭಿನ್ನವಾದ ಇನ್ನೊಂದು ಗುಂಪಿದೆ. ಅವರು ಸಮಸ್ಯೆ ಅರಿವಿಗೆ ಬರುತ್ತಿದ್ದಂತೆಯೇ ಅದನ್ನು ಪರಿಹರಿಸಲು ಮುಂದಾಗುತ್ತಾರೆ. ನನ್ನ ದೃಷ್ಟಿಯಲ್ಲಿ ಇವರೇ ನಿಜವಾದ ಉದ್ಯಮಶೀಲರು ಎಂದರು.ಈಗ ಒಬ್ಬ ರೈತನಿಗೆ ತನ್ನ ಹೊಲದಲ್ಲಿ ಸಮೃದ್ಧ ಬೆಳೆ ತೆಗೆಯಬೇಕಿದೆ. ಆದರೆ, ಆಗುತ್ತಿಲ್ಲ. ಒಂದು ವೇಳೆ ಆ ರೈತ ಸಮಸ್ಯೆಯ ಮೂಲ ಏನು ಎಂಬುದನ್ನು ತಾನೇ ಗುರುತಿಸಿ ಅದಕ್ಕೆ ತನ್ನದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಂಡರೆ ಆತನೂ ಉದ್ಯಮಶೀಲ ವ್ಯಕ್ತಿಯಾಗುತ್ತಾನೆ ಎಂದರು.
ಕಳೆದ ಹತ್ತು ವರ್ಷಗಳಿಂದ ನಾವು ಈ ದಿಸೆಯಲ್ಲಿ ವಿನೂತನ ಪ್ರಯೋಗದಿಂದ ಯಶಸ್ಸು ಕಂಡಿದ್ದೇವೆ. ಗ್ರಾಮೀಣ ಭಾಗದಿಂದ ಬಂದ ನೂರಾರು ಯುವಜನರ ಮನೋಬಲ ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬನೆ ಸಾಧಿಸುವ ಪಾಠ ಅವರಿಗೆ ಸಿಕ್ಕಿದೆ. ಕೃಷಿ ತಂತ್ರಜ್ಞಾನದ ಬಗ್ಗೆ ಕೃಷಿ ಯೋಜನೆಯೂ ಇದೆ ಎಂದರು.ಪಿಕ್ಸೆಲ್ ಕಂಪನಿಯ ಸ್ಥಾಪಕ ಅವೈಸ್ ಅಹಮದ್ ಮಾತನಾಡಿ, ಸದ್ಯ ಇಂಟರ್‌ನೆಟ್ ಜಗತ್ತಿನಲ್ಲಿ ನಾವೆಲ್ಲರೂ ಇದ್ದೇವೆ. ಕುಳಿತಲ್ಲಿಯೇ ಎಲ್ಲವನ್ನು ಅರಿಯುವ ಸೌಲಭ್ಯಗಳಿವೆ. ಸಾಮಾನ್ಯ ಜನರಲ್ಲಿ ವಿಭಿನ್ನ ಯೋಜನೆ, ಯೋಚನೆಗಳು ಬರುತ್ತಿವೆ. ಕಳೆದ ಹಲವು ವರ್ಷಗಳಿಂದ ಜಾಗತಿಕವಾಗಿ ಬಹಳ ಬದಲಾಗಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ಮೂಲಸೌಕರ್ಯಗಳಿದ್ದು, ಅವುಗಳನ್ನು ಅವಕಾಶಗಳಾಗಿ ಬದಲಾಯಿಸಿಕೊಳ್ಳಬೇಕಿದೆ. 2047ಕ್ಕೆ ದೇಶದಲ್ಲಿ ಸಾಕಷ್ಟು ಸುಧಾರಣೆಗಳಾಗಲಿವೆ ಎಂದರು.
ದಿ ಬೆಟರ್ ಇಂಡಿಯಾ ಸಂಸ್ಥಾಪಕಿ ಅನುರಾಧಾ ಪರೇಖ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ವಿವಿಧ ಸಂವಾದ ಕಾರ್ಯಕ್ರಮಗಳು ನಡೆದವು.