ಯುವ ಜನಾಂಗ ಗೊಂದಲಕ್ಕೀಡಾಗದೇ ಗುರಿಯತ್ತ ಗಮನ ಇರಲಿ

| Published : Sep 29 2025, 01:04 AM IST / Updated: Sep 29 2025, 01:05 AM IST

ಸಾರಾಂಶ

ಬಡತನ, ಕಷ್ಟಗಳು ಜೀವನದ ಪಾಠ ಕಲಿಸುತ್ತವೆ. ನಮ್ಮ ಕುಟುಂಬದ ಸದಸ್ಯರು ಹೆಮ್ಮೆ ಪಡುವಂತೆ ನಮ್ಮ ವರ್ತನೆ ಇರಬೇಕು. ಯಾವ ಸಂದರ್ಭದಲ್ಲೂ ಗೊಂದಲಕ್ಕೆ ಈಡಾಗದೇ ನಮ್ಮ ಗುರಿಯತ್ತ ಗಮನ ಹರಿಸಬೇಕು. ಛಲ ಬಿಡದೆ ಧನಾತ್ಮಕ ಮನೋಭಾವದಿಂದ ಗುರಿಯೆಡೆಗೆ ಸಾಗಬೇಕು.

ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಹಾಗೂ ವಯೋಮಿತಿ ಹೆಚ್ಚಳ ವಿಷಯವಾಗಿ ಇತ್ತೀಚಿಗಷ್ಟೇ ಸಾವಿರಾರು ವಿದ್ಯಾರ್ಥಿಗಳು ಧಾರವಾಡದಲ್ಲಿ ದೊಡ್ಡ ಮಟ್ಟದ ರ್ಯಾಲಿ ನಡೆಸಿರುವ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಇಲ್ಲಿಯ ಮಗದುಮ್ಮ ಕಲ್ಯಾಣ ಮಂಟದಲ್ಲಿ ಹು-ಧಾ ಪೊಲೀಸ್ ಕಮಿಶನರೇಟ್‌ ವತಿಯಿಂದ ವಿಶೇಷ ಕಾರ್ಯಾಗಾರ ನಡೆಯಿತು.

ಬಡತನ, ಕಷ್ಟಗಳು ಜೀವನದ ಪಾಠ ಕಲಿಸುತ್ತವೆ. ನಮ್ಮ ಕುಟುಂಬದ ಸದಸ್ಯರು ಹೆಮ್ಮೆ ಪಡುವಂತೆ ನಮ್ಮ ವರ್ತನೆ ಇರಬೇಕು. ಯಾವ ಸಂದರ್ಭದಲ್ಲೂ ಗೊಂದಲಕ್ಕೆ ಈಡಾಗದೇ ನಮ್ಮ ಗುರಿಯತ್ತ ಗಮನ ಹರಿಸಬೇಕು. ಛಲ ಬಿಡದೆ ಧನಾತ್ಮಕ ಮನೋಭಾವದಿಂದ ಗುರಿಯೆಡೆಗೆ ಸಾಗಬೇಕು. ಶ್ರಮ ಪಡದೇ ಗುರಿ ತಲುಪುವುದು ಅಸಾಧ್ಯ ಎಂದು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಯಶಸ್ಸಿನ ಸೂತ್ರಗಳನ್ನು ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡೆದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲರಲ್ಲೂ ಇರುತ್ತದೆ. ಅದಕ್ಕೆ ತಕ್ಕ ಪೂರ್ವ ತಯಾರಿಗಳನ್ನು ಪ್ರಶಿಕ್ಷಣಾರ್ಥಿಗಳು ಮಾಡಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದು ಶ್ರಮವಹಿಸಿದಾಗ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹಾಗೂ ಉನ್ನತ ಹುದ್ದೆ ಅಲಂಕರಿಸಬಹುದಾಗಿದೆ ಎಂದರು.

2019ನೇ ಬ್ಯಾಚ್‌ನಲ್ಲಿ 2ನೇ ರ‍್ಯಾಂಕ್ ಪಡೆದ ಪಿ.ಎಸ್.ಐ ಮಲ್ಲಿಕಾರ್ಜುನ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ತಮ್ಮ ಅಧ್ಯಯನದೊಂದಿಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮರ್ಪಕವಾದ ಪೂರ್ವ ಸಿದ್ಧತೆ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶಕ ಎಂದರೆ ಪ್ರಶ್ನೆ ಪತ್ರಿಕೆ. ಶ್ರಮವಹಿಸಿ ಅಧ್ಯಯನ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು.

2020ನೇ ಬ್ಯಾಚಿನ 6ನೇ ರ‍್ಯಾಂಕ್ ಪಡೆದ ಪಿ.ಎಸ್.ಐ ಮಂಜುನಾಥ ಟಿ.ಎಂ, ಸಾಧನೆಯ ಕಿಚ್ಚು ಯುವ ಜನತೆಯಲ್ಲಿ ಸಾಧನೆಗೆ ಒಯ್ಯಲಿದೆ. ಬಡತನ, ಕಷ್ಟ, ನೋವುಗಳನ್ನು ಮೆಟ್ಟಿನಿಂತು ಗುರಿ ಸಾಧಿಸಿರುವುದಕ್ಕೆ ನಾನೇ ಉದಾಹರಣೆ ಎಂದರು.

2025ನೇ ಬ್ಯಾಚ್ 4ನೇ ರ‍್ಯಾಂಕ್ ಪಡೆದ ಪ್ರೊಬೆಷನರಿ ಪಿ.ಎಸ್.ಐ ಅಕ್ಷತಾ ಗದಗ ಮಾತನಾಡಿ, ಪರೀಕ್ಷೆಗೆ ಸಿದ್ಧರಾಗುವವರು ಅನಗತ್ಯ ಗೊಂದಲಗಳನ್ನು ಹೊರಹಾಕಿ ಅಧ್ಯಯನ ಹಾಗೂ ಪರೀಕ್ಷೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಗುರಿ ಸಾಧಿಸಲು ಸಹಕಾರಿ ಎಂದರು.

2022 ನೇ ಬ್ಯಾಚ್ 14 ನೇ ರ‍್ಯಾಂಕ್ ಪಡೆದ ಎಸಿಪಿ ಶಿವರಾಜ ಕಟಕಭಾವಿ, 2025ನೇ ಬ್ಯಾಚ್ 155ನೇ ರ‍್ಯಾಂಕ್ ಪ್ರೊಬೆಷನರಿ ಪಿ.ಎಸ್.ಐ ಪವನ ಚಿನ್ನಿಕಟ್ಟಿ ಮಾತನಾಡಿದರು. ಡಿಸಿಪಿ ಮಹಾನಿಂಗ ನಂದಗಾವಿ, ಡಿಸಿಪಿ ರವೀಶ.ಸಿ.ಆರ್, ಧಾರವಾಡ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ಸಂಗಮೇಶ ದಿಂಡಿಗನಾಳ, ದಯಾನಂದ ಶೇಗುಣಸಿ, ಎನ್.ಸಿ. ಕಾಡದೇವರಮಠ, ಜ್ಯೋರ್ತಿಲಿಂಗ್ ಹೊನಕಟ್ಟಿ ಇದ್ದರು.