ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಮಾಜದಲ್ಲಿನ ಅಶಾಂತಿಯ ಕುರಿತು ಧ್ವನಿ ಎತ್ತುವ ನಿಟ್ಟಿನಲ್ಲಿ ಕಲಾವಿದನಿಗೆ ರಂಗಭೂಮಿಯೇ ಅತ್ಯುತ್ತಮ ಮಾರ್ಗ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಲಿ ಎಂದು ಹಿರಿಯ ರಂಗಕರ್ಮಿ, ಹೆಸರಾಂತ ನಟ ನಾನಾ ಪಾಟೇಕರ್ ಆಶಿಸಿದ್ದಾರೆ.ನಿರ್ದಿಗಂತ ಸಂಸ್ಥೆ ವತಿಯಿಂದ ಅಸ್ತಿತ್ವ ಸಂಸ್ಥೆಯ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ ಆರು ದಿನಗಳ ಕಾಲ ಹಮ್ಮಿಕೊಂಡಿರುವ ‘ನೇಹದ ನೇಯ್ಗೆ’ ರಂಗೋತ್ಸವಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.ಆ ಕಾಲದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯಂಥ ಅತ್ಯಂತ ಸರಳ, ಸಜ್ಜನಿಕೆಯ ಆದರ್ಶ ನಮ್ಮ ಮುಂದಿತ್ತು. ಈಗ ಕಾಲ ಬದಲಾಗಿದೆ. ರಾಜಕೀಯ ರಂಗದ ಪರಿಸ್ಥಿತಿಯೂ ತೀರ ಹದಗೆಟ್ಟಿರುವುದು ನಿಜ. ಇವೆಲ್ಲವನ್ನು ರಂಗಭೂಮಿಯ ಮೂಲಕ ಮಾತನಾಡುವಂತಾಗಬೇಕು. ರಂಗಭೂಮಿಗೆ ಆ ತಾಕತ್ತು ಇದೆ. ಅದರಲ್ಲಿ ಯಶಸ್ಸು ಪಡೆಯಬಹುದೋ ಬೇರೆ ಮಾತು, ಪ್ರಯತ್ನ ನಡೆಯಬೇಕು ಎಂದರು.
ನನಗೆ ಕನ್ನಡ, ತುಳುವಿನ ಕೆಲವೊಂದು ಶಬ್ದಗಳು ಮಾತ್ರವೇ ಗೊತ್ತು. ಹಾಗಿದ್ದರೂ ನಾನು ಈ ಭಾಷೆಗಳಲ್ಲಿ ನಟಿಸಿದ್ದೇನೆ. ಅದು ಕಲಾವಿದನ ತಾಕತ್ತು. ಪ್ರತಿನಿತ್ಯ ಹೊಸತನ್ನು ಕಲಿಯುವ ಮನೋವೃತ್ತಿ, ಶೋಧನೆಯ ಆಸಕ್ತಿ ಕಲಾವಿದನಿಗೆ ಬಹು ಮುಖ್ಯ ಎಂದು ನಾನಾ ಪಾಟೇಕರ್ ಕಿವಿಮಾತು ಹೇಳಿದರು.ಧರ್ಮಗಳ ಗೌರವಿಸಿದರೆ ಜಗಳವೇ ಇಲ್ಲ:ನಾವು ಪರಸ್ಪರ ಧರ್ಮಗಳನ್ನು ಗೌರವಿಸಿದರೆ ಜಗಳಕ್ಕೆ ಆಸ್ಪದವೇ ಇರಲ್ಲ. ಸಮಾಜದಲ್ಲಿ ತಲೆದೋರುತ್ತಿರುವ ಭಿನ್ನಾಭಿಪ್ರಾಯ, ಜಗಳಗಳು ಅಂತ್ಯವಾಗಲಿದೆ. ಎಲ್ಲವೂ ನಮ್ಮ ಕೈಯಲ್ಲೇ ಇದೆ, ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದರು.ನಟ ಸಾಮ್ರಾಟ ಚಲನಚಿತ್ರ ಮುಗಿಸಿದಾಗ ನಾನು ಅದ್ಭುತ ಮಾಡಿದ್ದೇನೆ ಎಂದುಕೊಂಡಿದ್ದೆ. ಆದರೆ ನೈಜ ರೈತರ ದುಃಖ ನೋಡಿದಾಗ ನನ್ನ ಆಲೋಚನೆಯೇ ಭಿನ್ನವಾಯಿತು. ರೈತರ ಆತ್ಮಹತ್ಯೆ, ನೋವು, ಸಂಕಷ್ಟಗಳನ್ನು ನೋಡಿ ಫೌಂಡೇಶನ್ ಆರಂಭಿಸಲು ಪ್ರೇರಣೆ ನೀಡಿತು. ಕಲಾವಿದನಾಗಿ ನಾವು ಗಳಿಸಿದ ಮುಷ್ಟಿಯಲ್ಲಿ ಒಂದು ಚಿಟಿಕೆಯಷ್ಟಾದರೂ ಸಮಾಜಕ್ಕೆ ನೀಡುವುದು ನಮ್ಮ ಜವಾಬ್ದಾರಿ. ಇದನ್ನು ಮರೆಯಬಾರದು ಎಂದು ನಾನಾ ಪಾಟೇಕರ್ ಹೇಳಿದರು.ನಿರ್ದಿಗಂತ ಸಂಸ್ಥೆಯ ರೂವಾರಿ, ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ಕಳೆದ ಒಂಭತ್ತು ತಿಂಗಳಿನಿಂದ ದೇಶ ಹಾಗೂ ರಾಜ್ಯದ ಹಲವು ಕಲಾ ಪ್ರತಿಭೆಗಳನ್ನು ಒಳಗೊಂಡು ನಿರ್ದಿಗಂತದೊಂದಿಗೆ ಎಲ್ಲ ರಂಗ ತಂಡಗಳನ್ನು ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಆತಂಕ, ಸವಾಲು, ಪ್ರತಿಭೆಗಳಿಗೆ ವೇದಿಕೆ ಸೃಷ್ಟಿ ಮಾಡಬೇಕಿದೆ, ಈ ನಿಟ್ಟಿನಲ್ಲಿ ಈ ರಂಗೋತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.ನಿರ್ದಿಗಂತ ರಂಗಭೂಮಿ ತಂಡವು ಆರಂಭದಲ್ಲಿ ಚಂದ್ರಶೇಖರ ಕಂಬಾರರ ‘ಹಾಡುವ ಮರ’ ಸಂಗೀತ ವಾಚನ ಮಾಡಿದರೆ, ಬಳಿಕ ತಂಡದ ಸದಸ್ಯರು ‘ಸಂವಿಧಾನದ ಪೀಠಿಕೆ’ಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.ಸಂತ ಅಲೋಶಿಯಸ್ ವಿವಿಯ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್, ರಂಗೋತ್ಸವದ ಪ್ರಮುಖರಾದ ಡಾ. ಶ್ರೀಪಾದ್ ಭಟ್, ರೆ.ಫಾ. ಆಲ್ವಿನ್ ಸೆರಾವೋ, ಚಂದ್ರಹಾಸ್ ಉಳ್ಳಾಲ್ ಮತ್ತಿತರರಿದ್ದರು. ಬಳಿಕ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಪ್ರಥಮ ದಿನದ ನಾಟಕ ಪ್ರದರ್ಶನಗೊಂಡಿತು.
ಮತದಾನ ಮಾಡದವರು ದೇಶದ್ರೋಹಿಗಳು: ನಮ್ಮ ಮತದಾನ ನಮ್ಮ ಅಸ್ತಿತ್ವ. ಐದು ವರ್ಷಗಳಿಗೊಮ್ಮೆ ಸಿಗುವ ಆ ಅವಕಾಶವನ್ನು ನಾವು ಉಪಯೋಗಿಸಬೇಕು. ಯಾರು ಈ ಅವಕಾಶವನ್ನು ಬಳಸಿಕೊಳ್ಳುವುದಿಲ್ಲವೋ, ಯಾರು ಮತದಾನ ಮಾಡುವುದಿಲ್ಲವೋ ಅವರು ನಿಜವಾದ ದೇಶದ್ರೋಹಿಗಳು ಎಂದು ಪರಿಗಣಿಸಬಹುದು ಎಂದು ನಾನಾ ಪಾಟೇಕರ್ ಹೇಳಿದರು.ಫೋಟೊ20ನಾನಾನಾನಾ ಪಾಟೇಕರ್ ಅವರನ್ನು ಗೌರವಿಸುತ್ತಿರುವ ಪ್ರಕಾಶ್ ರೈ.