ಸಾರಾಂಶ
ಕನ್ನಡಪ್ರಭ ವಾರ್ತೆ ಕುಕನೂರು
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಹಾಗೂ ಹಸುಗೂಸು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ತಕ್ಕ ಕ್ರಮ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಆಗ್ರಹಿಸಿದರು.ತಾಲೂಕಿನ ಆಡೂರು ಗ್ರಾಮದಲ್ಲಿ ಸಾವನ್ನಪ್ಪಿದ್ದ ಬಾಣಂತಿ ಮನೆಗೆ ತೆರಳಿದ ಅವರು, ಬಾಣಂತಿಯರ ಸಾವು ಇದೊಂದು ನೋವಿನ ಸಂಗತಿ. ಕಣ್ಣು ತೆಗೆಯಬೇಕಿದ್ದ ಹಸುಗೂಸು ಸಹ ಹುಟ್ಟುತ್ತಲೆ ಕಣ್ಣು ಮುಚ್ಚಿದೆ. ವೈದ್ಯರು ತಮ್ಮ ಕರ್ತವ್ಯ ಮರೆತು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಾಣಂತಿಯರ ಸಾವು ಕೊನೆಯಾಗಬೇಕು. ವೈದ್ಯರು ಕಾಳಜಿ ವಹಿಸಬೇಕು. ಬಾಣಂತಿ, ಹಸುಗೂಸು ಸಾವಿಗೆ ಕಾರಣರಾದ ವೈದ್ಯರ ಮೇಲೆ ಶಿಸ್ತು ಕ್ರಮ ಆಗಬೇಕು. ಇದೇ ಸಾವು ಜಿಲ್ಲೆಯಲ್ಲಿ ಕೊನೆಯಾಗಬೇಕು. ಬಡವರು ಸರ್ಕಾರಿ ಆಸ್ಪತ್ರೆ ನಂಬಿ ಬರುತ್ತಾರೆ. ಆದರೆ ಅಲ್ಲಿ ನಿಷ್ಕಾಳಜಿ ತೋರುವುದು ಯಾವ ನ್ಯಾಯ. ಜೀವ ಉಳಿಸುವ ವೈದ್ಯರು ಜೀವ ತೆಗೆಯುವ ಕಾರ್ಯ ಮಾಡುತ್ತಿದ್ದಾರೆಯೇ, ಇದು ಆತ್ಮಾವಲೋಕನ ಮಾಡಿಕೊಳ್ಳುವ ಘಟನೆ ಆಗಿದೆ. ಕೂಡಲೇ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯತನವನ್ನು ಕೊನೆಗಾಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೇಮಲತಾ ಸಾಂತ್ವನ:ವೈದ್ಯರು ದೇವರು ಎಂಬುದನ್ನು ಮರೆಯಬಾರದು ಎಂದು ಸ್ಥಳಕ್ಕೆ ಆಗಮಿಸಿದ ಎಂ.ಎಲ್.ಸಿ ಹೇಮಲತಾ ನಾಯಕ ಹೇಳಿದರು. ರೇಣುಕಾ ಕುಟುಂಬಕ್ಕೆ ಸಾಂತ್ವನ ಹೇಳಿ, ಸಾವನ್ನಪ್ಪಿದ್ದ ಹಸುಗೂಸನ್ನು ಎತ್ತಿಕೊಂಡು ಕಣ್ಣಿರು ಸುರಿಸಿದರು. ದೇವರಿಗೆ ಮುಗ್ದ ಮಗು ಕಾಣಲಿಲ್ಲವೇ, ತಾಯಿ ಮಗು ಏನು ತಪ್ಪು ಮಾಡಿದ್ದರು ಎಂದು ಕಂಬನಿ ಮಿಡಿದರು.