ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಲಿ

| Published : Nov 25 2024, 01:01 AM IST

ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಬದ್ಧತೆಯಿಂದ ಕೆಲಸ ಮಾಡುವ ವಿಜ್ಞಾನಿಯೊಬ್ಬ ತನ್ನ ಸಾಮರ್ಥ್ಯದ ಕೇವಲ ಶೇ. ೨೧ರಷ್ಟು ಮಾತ್ರ ಬಳಸುತ್ತಾನೆ ಎಂದು ಸಮೀಕ್ಷೆ ಹೇಳುತ್ತದೆ. ಹಾಗಾಗಿ ಶಿಕ್ಷಕರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು

ಶಿರಹಟ್ಟಿ: ಇಂದಿನ ಆಧುನಿಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯ ಹಾಗೂ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಾಗುತ್ತದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಉತ್ತಮ ಜ್ಞಾನ ಹೊಂದಿದ್ದು, ಎಲ್ಲ ಹಂತದ ಪರೀಕ್ಷೆ ಎದುರಿಸಿ ಪ್ರತಿಭೆ ಹೊಂದಿರುತ್ತೀರಿ. ಅದು ಸರಿಯಾಗಿ ಬಳಕೆಯಾಗಬೇಕು ಎಂದು ಜಿಲ್ಲಾ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ನೂತನವಾಗಿ ನೇಮಕಾತಿಯಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ವಾಗತ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಶಿಕ್ಷಕರನ್ನುದೇಶಿಸಿ ಮಾತನಾಡಿದರು.

ಅತಿ ಬದ್ಧತೆಯಿಂದ ಕೆಲಸ ಮಾಡುವ ವಿಜ್ಞಾನಿಯೊಬ್ಬ ತನ್ನ ಸಾಮರ್ಥ್ಯದ ಕೇವಲ ಶೇ. ೨೧ರಷ್ಟು ಮಾತ್ರ ಬಳಸುತ್ತಾನೆ ಎಂದು ಸಮೀಕ್ಷೆ ಹೇಳುತ್ತದೆ. ಹಾಗಾಗಿ ಶಿಕ್ಷಕರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿ ಮಗುವಿನ ಭಾವನೆ ಗೌರವಿಸುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು.ಶಿಕ್ಷಣದ ಮೂಲ ಉದ್ದೇಶ ಮಕ್ಕಳನ್ನು ನಿರ್ದಿಷ್ಟ ಜ್ಞಾನ ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವುದಾಗಿದೆ. ಶಿಕ್ಷಕರು ಪಾಠದ ಉದ್ದೇಶ ಅರಿತು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಕಲಿಕಾ ಬೋಧನೋಪಕರಣ ಬಳಸಿಕೊಂಡು ಚಟುವಟಿಕೆಯಾಧಾರಿತವಾಗಿ ಅರ್ಥಪೂರ್ಣ ಬೋಧನಾ ಕಲಿಕಾ ಪ್ರಕ್ರಿಯೆ ನಡೆಯಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷನಾಧಿಕಾರಿ ಎಚ್.ಎನ್. ನಾಣಕಿ ನಾಯಕ ಮಾತನಾಡಿ, ಶಿಕ್ಷಕರು ಮಕ್ಕಳ ಬಗ್ಗೆ ಸಕಾರಾತ್ಮಕತೆ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಅವರು ಇರುವಂತೆಯೇ ಸ್ವೀಕರಿಸುವುದನ್ನು ಕಲಿಯಬೇಕು. ಜತೆಗೆ ಮಕ್ಕಳಿಗೆ ಮಾದರಿಯಾಗುವಂತೆ ಶಿಕ್ಷಕರ ನಡೆಯಿರಬೇಕು ಎಂದು ಕಿವಿಮಾತು ಹೇಳಿದರು.

ಗುಣಾತ್ಮಕ ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದಷ್ಟೇ ಅಲ್ಲ. ಇಡೀ ವಿದ್ಯಾರ್ಥಿ ಜೀವನ ಬದಲಾಯಿಸುವ ಸಾಮರ್ಥ್ಯ, ಮಾನವೀಯ ಮೌಲ್ಯ ಉನ್ನತೀಕರಿಸುವ ಸಮಗ್ರ ವ್ಯಕ್ತಿತ್ವ ವಿಕಸನಗೊಳಿಸುವಂತಾಗಬೇಕು. ಈ ದಿಸೆಯಲ್ಲಿ ಶಿಕ್ಷಕರು ಹೊಸತನ, ಕ್ರಿಯಾಶೀಲದೊಂದಿಗೆ ಗುಣಾತ್ಮಕ ಬೋಧನೆಗೆ ಒತ್ತು ನೀಡಿದಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಸಾಹಿತಿ ಡಾ.ನಿಂಗು ಸೊಲಗಿ ಉಪನ್ಯಾಸ ನೀಡಿ, ಕಾಲಕಾಲಕ್ಕೆ ಬದಲಾದ ಸಾಂಸ್ಕೃತಿಕ ಆಯಾಮಗಳು ಹಾಗೂ ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಅಗತ್ಯ ಅಂಶಗಳ ಕುರಿತು ಹೇಳಿದರು.

ಕಲಿಕೆ ಎಂಬುದು ತಾಯಿಯ ಗರ್ಭದಿಂದಲೇ ಪ್ರಾರಂಭವಾಗಿ ವ್ಯಕ್ತಿಯ ಜೀವನದ ಕೊನೆಯ ಕ್ಷಣದವರೆಗೂ ನಡೆಯುತ್ತದೆ ಎಂದು ಹೇಳಿದ ಅವರು, ಡಿಪಿಇಪಿ ಯೋಜನೆ ಮಕ್ಕಳಲ್ಲಿ ಶಿಕ್ಷಕನು ಒಬ್ಬನಾಗಿ ಮಕ್ಕಳೊಂದಿಗೆ ಬೆರೆತು ಪಾಠ ಬೋಧನೆ ಮಾಡಲು ತಿಳಿಸುತ್ತದೆ ಎಂದು ಹೇಳಿದರು.

ಆಧುನಿಕ ಶೈಕ್ಷಣಿಕ ಸವಾಲು ಎದುರಿಸಲು ಹಾಗೂ ಮುಂದೆ ಬರುವ ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಣ ನೀಡಲು ಪ್ರತಿಯೊಬ್ಬ ಶಿಕ್ಷಕರು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜತೆಗೆ ಎನ್.ಸಿ.ಎಫ್. ೨೦೦೫ ಕಲಿಯುವುದನ್ನು ಕಲಿಸಬೇಕು ಎಂಬ ಅಂಶ ಹಾಗೂ ಕಲಿತದ್ದನ್ನ ಮಕ್ಕಳು ತಮ್ಮ ನಿಜ ಜೀವನದೊಂದಿಗೆ ಸಂಬಂಧಿಕರಿಸಿಕೊಳ್ಳಲು ಸಮರ್ಥರಾಗಬೇಕು ಎಂಬ ಅಂಶಗಳನ್ನು ಹೇಳಿದರು.

ಭಾರತಿ ಚೌಡಾಪೂರ, ಬಿ.ಬಿ.ಲಮಾಣಿ, ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ಹದ್ಲಿ, ರಾಮನಗೌಡ್ರ, ಶಂಕರ ನಾವ್ಹಿ, ಹಾಲನಗೌಡ ಪಾಟೀಲ, ಪರಸಪ್ಪ ಬಂತಿ, ಎನ್.ಎನ್. ಸಾವಿರಕುರಿ, ಪರಸಪ್ಪ ಮ್ಯಾಗೇರಿ, ಗಿರೀಶ ಕೋಡಬಾಳ, ಕಾಶಪ್ಪ ಸ್ವಾಮಿ, ಶಿವಾನಂದ ಹಾವನೂರ, ಬಸವರಾಜ ಯರಗುಪ್ಪಿ, ಬಿ.ಎಸ್. ಹರ್ಲಾಪೂರ, ಬಸವರಾಜ ಕಳಸಾಪೂರ ಸೇರಿದಂತೆ ಉಭಯ ತಾಲೂಕುಗಳ ಸಂಘದ ಅಧ್ಯಕ್ಷರು ಇತರರು ಇದ್ದರು.