ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ

| Published : Nov 25 2023, 01:15 AM IST

ಸಾರಾಂಶ

ರೈತರ ಬೇಡಿಕೆಗನುಸಾರ ಮೇವು ಪೂರೈಕೆಗೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೂ ತ್ವರಿತ ಕ್ರಮ ಕೈಗೊಳ್ಳಬೇಕು. ಇಲಾಖೆಗೆ ರೈತರಿಂದಲೂ ಮೇವು ಖರೀದಿಸಲು ಅವಕಾಶವಿದ್ದು, ಈ ಕುರಿತು ರೈತರಿಗೆ ಜಾಗೃತಿ ಮೂಡಿಸುವುದರ ಜತೆಗೆ ಕಟಾವಿನ ನಂತರ ಉಳಿಯುವ ಮೇವನ್ನು ಸುಡದಂತೆ ರೈತರಿಗೆ ಅರಿವು ಮೂಡಿಸಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಹರಪನಹಳ್ಳಿ ಮತ್ತು ಕೂಡ್ಲಿಗಿಯಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಮೇವು ಸಂಗ್ರಹಿಸಲು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರಿಂದ ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ. ಈ ಹಿನ್ನೆಲೆಯಲ್ಲಿ ಸಮರ್ಪಕ ಮೇವು ಪೂರೈಕೆಗೆ ಕೃಷಿ, ಪಶು ಇಲಾಖೆ ಹಾಗೂ ತಹಸೀಲ್ದಾರರು ಸೇರಿ ತಾಲೂಕುವಾರು ಜಂಟಿ ಸರ್ವೇ ಕೈಗೊಂಡು ಜಿಲ್ಲೆಯ ರೈತರಲ್ಲಿರುವ ಮೇವಿನ ಲಭ್ಯತೆ, ಅವಶ್ಯಕತೆ ಹಾಗೂ ಉಳಿಕೆ ಮೇವಿನ ವಿವರದ ಮಾಹಿತಿ ಪಡೆದು ರೈತರ ಪಟ್ಟಿ ತಯಾರಿಸಬೇಕು.

ರೈತರ ಬೇಡಿಕೆಗನುಸಾರ ಮೇವು ಪೂರೈಕೆಗೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೂ ತ್ವರಿತ ಕ್ರಮ ಕೈಗೊಳ್ಳಬೇಕು. ಇಲಾಖೆಗೆ ರೈತರಿಂದಲೂ ಮೇವು ಖರೀದಿಸಲು ಅವಕಾಶವಿದ್ದು, ಈ ಕುರಿತು ರೈತರಿಗೆ ಜಾಗೃತಿ ಮೂಡಿಸುವುದರ ಜತೆಗೆ ಕಟಾವಿನ ನಂತರ ಉಳಿಯುವ ಮೇವನ್ನು ಸುಡದಂತೆ ರೈತರಿಗೆ ಅರಿವು ಮೂಡಿಸಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಹರಪನಹಳ್ಳಿ ಮತ್ತು ಕೂಡ್ಲಿಗಿಯಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಮೇವು ಸಂಗ್ರಹಿಸಲು ಸೂಚನೆ ನೀಡಿದರು.

ಪಶು ಇಲಾಖೆ ಉಪನಿರ್ದೇಶಕ ಡಾ. ಬಸವರಾಜ ಬೆಣ್ಣೆ ಮಾತನಾಡಿ, ಜಿಲ್ಲೆಯಲ್ಲಿ ೨.೨೮ ಲಕ್ಷ ದನಗಳು, ೯೩ ಸಾವಿರ ಎಮ್ಮೆಗಳು ಹಾಗೂ ೮.೧೩ ಲಕ್ಷ ಕುರಿ, ಮೇಕೆಗಳಿವೆ. ಜಿಲ್ಲೆಯ ತಾಲೂಕಿಗೆ 1ರಂತೆ ಗೋಶಾಲೆಗಳನ್ನು ಪ್ರಾರಂಭಿಸಲು ಹಾಗೂ ಹೋಬಳಿಗೆ ಒಂದರಂತೆ ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ ಯೋಜನೆ ರೂಪಿಸಲಾಗಿದೆ. ಒಂದು ವಾರಕ್ಕೆ ೧೭,೧೧೦ ಟನ್ ಮೇವು ಅವಶ್ಯವಿದ್ದು, ೨೯ ವಾರಗಳಿಗೆ ಅವಶ್ಯವಿರುವ ಮೇವನ್ನು ಜಿಲ್ಲೆಯಲ್ಲಿ ಲಭ್ಯವಿದೆ. ರೈತರಿಂದ ಮೇವು ಖರೀದಿಸಲು ಟೆಂಡರ್ ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಿಲ್ಲೆಯಲ್ಲಿ ಜ. ೧ರಿಂದ ನ. ೨೩ರ ವರೆಗೆ ವಾಡಿಕೆ ಮಳೆ ೬೩೧ ಮಿಮೀ ಇದ್ದು, ೩೩೬ ಮಿಮೀ ವಾಸ್ತವಿಕ ಮಳೆಯಾಗಿ, ಮಳೆ ಶೇ. ೪೭ ಕೊರತೆಯಾಗಿದೆ ಎಂದರು.

ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ:

ಪ್ರಸ್ತುತ ಬರ ಹಿನ್ನೆಲೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇದ್ದು, ಸಮಸ್ಯೆ ಉಂಟಾಗಬಹುದಾದ ಗ್ರಾಮಗಳು, ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಸ್ಥಳಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸುವುದು, ಕೊಳವೆಬಾವಿ ದುರಸ್ತಿ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುವುದರ ಜತೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಗ್ರಾಮ ಪಂಚಾಯಿತಿಗೆ ₹೧೦ರಿಂದ ₹೧೫ ಲಕ್ಷ ಅನುದಾನವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಮೀಸಲಿರಿಸಲಾಗಿದೆ. ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಮತ್ತು ಪೈಪ್‌ಲೈನ್ ಅಳವಡಿಕೆಗೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ:

ವಿಜಯನಗರ, ಚಿತ್ರದುರ್ಗ, ಪಾವಗಡ ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆ ಕೂಡ್ಲಿಗಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಂಜಿನಿಯರ್ ಸಭೆಗೆ ತಿಳಿಸಿದಾಗ ಈ ವರ್ಷ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಬಹುಗ್ರಾಮ ಕುಡಿಯುವ ನೀರಿನ ಜಾಕ್‌ವೆಲ್‌ಗೆ ನೀರು ಲಭ್ಯವಾಗದಿದ್ದಲ್ಲಿ ಸಮಸ್ಯೆಯಾಗಲಿದ್ದು, ಇದಕ್ಕೆ ಯೋಜನೆ ರೂಪಿಸಿಕೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಡಾ. ಅನುರಾಧ ಜಿ., ಉಪವಿಭಾಗಾಧಿಕಾರಿ ಮಹಮದ್ ಅಲಿ ಅಕ್ರಂಷಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.