ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶಕ್ಕೆ ಆಗಸ್ಟ್ 15, 1947 ಸ್ವಾತಂತ್ರ್ಯ ದೊರೆತರು ಸಹ ಅಂದು ಧ್ವಜಾರೋಣವನ್ನು ಮಾಡುವುದು ಮಾತ್ರ ಆಗಿರಲಿಲ್ಲ, ಅದು ಭವ್ಯ ಭಾರತದ ಭವ್ಯತೆ ಎತ್ತಿ ಹಿಡಿಯುವ ದಿನವಾಗಿತ್ತು ಮತ್ತು ಆ ಸ್ವಾತಂತ್ರ ಹೋರಾಟಕ್ಕಾಗಿ ಧೈರ್ಯದಿಂದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ತ್ಯಾಗ, ಸಮರ್ಪಣಾ ಮನೋಭಾವದ ರಕ್ತ ಇಂದು ನಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದೆ ಎನ್ನುವುದು ಹೆಮ್ಮೆ ಪಡಬೇಕಾದ ವಿಷಯವಾಗಿದೆ ಎಂದು ಕಲಬುರಗಿ ಪೀಠದ ಗೌರವಾನ್ವಿತ ಹಿರಿಯ ನ್ಯಾ.ಹೆಚ್.ಪಿ. ಸಂದೇಶ ಹೇಳಿದರು.ಶುಕ್ರವಾರ ಉಚ್ಫ ನ್ಯಾಯಾಲಯದ ಆವರಣದಲ್ಲಿ 79ನೇ ಸ್ವಾತಂತ್ರೋತ್ಸವ ದಿನಚಾರಣೆ ಅಂಗವಾಗಿ ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಭಾರತದಲ್ಲಿ ಪ್ರಜಾಪ್ರಭುತ್ವ ಅಳವಡಿಸಿಕೊಂಡ ನಂತರ ನ್ಯಾಯಾಂಗವು ಸರ್ಕಾರದ ಅಂಗಗಳಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅದು ಮುಖ್ಯವಾಗಿ ನಾಗರಿಕರಿಗೆ ಕಾನೂನು ಅರ್ಥೈಸುತ್ತದೆ, ಜನರ ವಿವಾದಗಳನ್ನು ಪರಿಹರಿಸುತ್ತದೆ ಮತ್ತು ನ್ಯಾಯವನ್ನು ಎತ್ತಿ ಹಿಡಿಯುತ್ತದೆ ಎಂದರು.
ನ್ಯಾಯಾಂಗವು ಪ್ರಜಾಪ್ರಭುತ್ದ ಕಾವಲುಗಾರ ಮತ್ತು ಸಂವಿಧಾನದ ರಕ್ಷಕ, ಸತ್ಯವನ್ನು ಹುಡುಕುವುದು ನ್ಯಾಯಾಲಯದ ಕರ್ತವ್ಯ. ದೇಶದ ಸಂರಕ್ಷಣೆ ಮತ್ತು ನೈತಿಕ ತತ್ವಗಳನ್ನು ಆಚರಣೆ ಮಾಡುತ್ತದೆ ಎಂದು ತಿಳಿಸಿದರು.ನ್ಯಾಯಾಂಗದ ಆಧಾರಸ್ತಂಭ ನ್ಯಾಯಾಧೀಶರು ವಕೀಲರು ಮತ್ತು ಸಿಬ್ಬಂದಿ ವರ್ಗದ ಜವಾಬ್ದಾರಿ ಆಗಿರುತ್ತದೆ. ನ್ಯಾಯಾಂಗದ ಮೇಲೆ ಜನರು ವಿಶ್ವಾಸವನ್ನು ಇರಿಸುವಂತೆ ಮಾಡಲು ನಾವು ಶ್ರಮಿಸೋಣ ಎಂದು ಕರೆ ನೀಡಿದರು.
ವಿವೇಕಾನಂದರ ಭೋಧನೆಗಳು ಮತ್ತು ಸಂದೇಶಗಳು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ನಾಯಕರ ಮೇಲೆ ಪ್ರಭಾವ ಬೀರಿದ್ದವು ಎಂದು ತಿಳಿಸಿದರು.ಮಹಾತ್ಮ ಗಾಂಧಿ, ಸಭಾಷ ಚಂದ್ರಬೋಸ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತನ್ನು ಉಲ್ಲೇಖಿಸುತ್ತ ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ, ಆ ಓದು ನಮಗೆ ಎಷ್ಟು ಸಂಸ್ಕಾರ ಕಲಿಸಿದೆ ಎಂಬುದು ಮುಖ್ಯ ಎಂದು ಹೇಳಿದರು.ಸ್ವಾತಂತ್ರ್ಯ ಪರಂಪರೆಯ ಉತ್ತರಾಧಿಕಾರಿಗಳು, ಸ್ವಾತಂತ್ರ್ಯದ ಜ್ಯೋತಿ ಮುಂದಕ್ಕೆ ಕೊಂಡೊಯ್ಯುವುದು ಮತ್ತು ಬಲವಾದ ಸ್ವತಂತ್ರ ಭಾರತವನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ಸ್ವಾವಲಂಬನೆ ಅಳವಡಿಸಿಕೊಳ್ಳಬೇಕು.
ಆರ್ಥಿಕ, ಕೈಗಾರಿಕೆ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ನಾವು ಸ್ವಾವಲಂಭಿಗಳಾಗಿರಬೇಕು, ಆಗ ಮಾತ್ರ ನಮ್ಮ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ. ಮುಕ್ತ ಮತ್ತು ಸಮೃದ್ಧ ಭಾರತದ ಉದ್ದೇಶಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ ಎಂದು ಹೇಳಿದರು.ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ, ಜ್ಯೋತಿ ಮೂಲಿಮನಿ, ಶಿವಶಂಕರ ಅಮರಣ್ಣವರ್, ಎಂ.ಜಿ. ಉಮಾ, ಟಿ.ಎಂ. ನದಾಫ್, ಅಪರ ಮಹಾವಿಲೇಖನಾಧಿಕಾರಿಗಳಾದ ಬಸವರಾಜ ಚೇಂಗಣಿ, ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಎಸ್.ವಿ. ಪಸಾರ, ಉಚ್ಫನ್ಯಾಯಾಲಯ ಘಟಕದ ಉಪಾಧ್ಯಕ್ಷರಾದ ಅನಂತ ಜಹಾಗೀರದಾರ, ಸಂಘದ ಪ್ರಧಾನ ಕಾರ್ಯದರ್ಶಿಗಳು, ಇತರ ಪದಾಧಿಕಾರಿಗಳು, ಸರ್ಕಾರಿ ವಕೀಲರು ಮತ್ತು ಹಿರಿಯ ಮತ್ತು ಕಿರಿಯ ವಕೀಲರು, ಉಚ್ಫ ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.