ಚನ್ನಪಟ್ಟಣ: ದೇಶವನ್ನು ಕಾಯುವ ಯೋಧ, ಅನ್ನದಾತ ರೈತ ಹಾಗೂ ಕಾಯಕಯೋಗಿ ಕಾರ್ಮಿಕರಿಗೆ ಪ್ರತಿಯೊಬ್ಬರೂ ಗೌರವ ಕೊಟ್ಟಾಗ ಮಾತ್ರ ಸಮಾಜ ಮತ್ತು ದೇಶ ಪ್ರಗತಿ ಸಾಧ್ಯ ಎಂದು ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಅಭಿಪ್ರಾಯಪಟ್ಟರು

ಚನ್ನಪಟ್ಟಣ: ದೇಶವನ್ನು ಕಾಯುವ ಯೋಧ, ಅನ್ನದಾತ ರೈತ ಹಾಗೂ ಕಾಯಕಯೋಗಿ ಕಾರ್ಮಿಕರಿಗೆ ಪ್ರತಿಯೊಬ್ಬರೂ ಗೌರವ ಕೊಟ್ಟಾಗ ಮಾತ್ರ ಸಮಾಜ ಮತ್ತು ದೇಶ ಪ್ರಗತಿ ಸಾಧ್ಯ ಎಂದು ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಅಭಿಪ್ರಾಯಪಟ್ಟರು.

ನಗರದ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಲಯನ್ಸ್ ಸಂಸ್ಥೆ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಭಾರತ ಸೇವಾದಳ ಹಾಗೂ ಹಮ್ ಪೌಂಡೇಶನ್ ಭಾರತ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ ನಿವೃತ್ತ ಯೋಧರಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಖಾಸಗಿ ಶಾಲಾ ಕಾಲೇಜುಗಳಲ್ಲಿ ವಾರಕ್ಕೆ ಒಂದು ದಿನ ನಿವೃತ್ತ ಯೋಧರು, ಪ್ರಗತಿಪರ ರೈತರಿಂದ ಮಕ್ಕಳಿಗೆ ತಮ್ಮ ಅನುಭವಗಳನ್ನು ಬೋಧಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ವ್ಯಕ್ತಿಯನ್ನು ಆತ ಧರಿಸುವ ಬಟ್ಟೆಗಳಿಂದ ಗೌರವ ಕೊಡದೆ ಆತನ ವ್ಯಕ್ತಿತ್ವದಿಂದ ಗೌರವ ಕೊಡಬೇಕು ಎಂದರು.

ಲಯನ್ಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಪಟೇಲ್ ರಾಜು ಮಾತನಾಡಿ, ಯೋಧರ ಸೇವೆಯನ್ನು ಸ್ಮರಿಸಿಕೊಂಡು ಎಲ್ಲಿ ಯೋಧರು ರೈತರು ನೆಮ್ಮದಿಯಾಗಿ ಇರುತ್ತಾರೋ ಆ ದೇಶ ಸಮೃದ್ಧವಾಗಿರುತ್ತದೆ ಎಂದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಚ್. ಜಿ.ಗೋವಿಂದಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವದ ಜೊತೆಗೆ ನಿವೃತ್ತ ಯೋಧರನ್ನು ಗೌರವಿಸುವುದನ್ನು ಲಯನ್ಸ್‌ ಸಂಸ್ಥೆ, ಇತರ ಸಂಸ್ಥೆಗಳ ಸಹಕಾರದೊಂದಿಗೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಯುವ ಸಮೂಹ ಮತ್ತು ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ದೇಶ, ಯೋಧ, ರೈತ ಮತ್ತು ಸ್ವಚ್ಛತೆ, ಪರಿಸರದ ಬಗ್ಗೆ ಪರಿಚಯ ಮಾಡಿಸಿ ಜಾಗೃತಿ ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಬೋಳೇಗೌಡ ಮಹೇಶ್, ಎಸ್. ಕೆ.ಕುಮಾರ್, ಭೀಮರಾಜು, ಮಂಜುಳಾ, ಉಷಾ ಹಾಗೂ ಸಾವಯವ ಕೃಷಿಕ ಯಲಿಯೂರು ಅಭಿಷೇಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ವಿ.ಸಿ.ಚಂದ್ರೇಗೌಡ, ವಲಯ ಅಧ್ಯಕ್ಷ ಕೆ. ತಿಪ್ರೇಗೌಡ, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಎನ್.ಕಾಡಯ್ಯ, ಮಾಲಿನಿ ಉಪಸ್ಥಿತರಿದ್ದರು. ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ಧರಣೀಶ್ ರಾಂಪುರ ಸ್ವಾಗತಿಸಿದರು.

ಪೊಟೋ೧ಸಿಪಿಟಿ೨:

ಚನ್ನಪಟ್ಟಣದ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.