ಸಾರಾಂಶ
ಬಸವ ಕಲ್ಯಾಣ ಮಠದಲ್ಲಿ ಗುರುಪೌರ್ಣಿಮೆ, ಡಾ.ಶಿವಕುಮಾರ ಸ್ವಾಮೀಜಿ ೧೧೭ನೇ ಜಯಂತಿಕನ್ನಡಪ್ರಭ ವಾರ್ತೆ ವಿಜಯಪುರ
ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನೆಡೆಗೆ ನಡೆಸುವ ಗುರುವಿನ ಮಹತ್ವ ಅರಿತು ಅವರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಹೋಬಳಿಯ ಚಂದೇನಹಳ್ಳಿ ಗೇಟ್ನಲ್ಲಿರುವ ಬಸವ ಕಲ್ಯಾಣ ಮಠದಲ್ಲಿ ಗುರುಪೌರ್ಣಿಮೆ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಅವರ ೧೧೭ನೇ ಜನ್ಮದಿನೋತ್ಸವ ಮತ್ತು ಬಸವ ಕಲ್ಯಾಣ ಮಠದ ೩೫ನೇ ವರ್ಷದ ಪೀಠಾರೋಹಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ಶಿವಕುಮಾರ ಸ್ವಾಮೀಜಿಗಳು ಸ್ಥಾಪಿಸಿರುವ ಸಿದ್ಧಗಂಗಾ ಶಾಖಾ ಮಠದ ಏಳಿಗೆಗಾಗಿ ಎಲ್ಲಾ ರೀತಿಯ ಸಹಕರಿಸುತ್ತೇನೆ. ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವವರು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ಸಿದ್ದಗಂಗಾ ಮಠ ರಾಜ್ಯದಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಶಿವಕುಮಾರ ಸ್ವಾಮೀಜಿ ಅವರ ಉದ್ದೇಶಗಳನ್ನು ನೆರವೇರಿಸುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅವರ ಹೆಸರು ಅಜರಾಮರವಾಗಿ ಬೆಳೆಯಬೇಕು. ಮಠದ ಮುಂಭಾಗದಲ್ಲಿ ನಿರ್ಮಿಸಿರುವ ಸಭಾಭವನದ ಆವರಣದಲ್ಲಿ ಎರಡು ಕೊಠಡಿಗಳ ನಿರ್ಮಾಣ ಮಾಡಿಕೊಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಕೆಲಸ ಆರಂಭಿಸಲಾಗುತ್ತದೆ ಎಂದು ಹೇಳಿದರು.ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವಸ್ವಾಮಿಜೀ ಮಾತನಾಡಿ, ಮಾನವನ ಜೀವನದಲ್ಲಿ ಗಳಿಸಿದ್ದೆಲ್ಲವೂ ಉಳಿಯುವುದಿಲ್ಲ. ಪರರಿಗಾಗಿ ಮಾಡಿರುವ ಸತ್ಕಾರ್ಯಗಳೇ ನಮ್ಮ ಆಸ್ತಿ. ಭಗವಂತನ ಪ್ರೇರಣೆಯಿಂದ ಉತ್ತಮ ಕಾರ್ಯಗಳಾಗಬೇಕು. ಮಠದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಬಸವ ಕಲ್ಯಾಣ ಮಠದಲ್ಲಿ ನಿರ್ಮಾಣಗೊಂಡಿರುವ ಸಭಾ ಭವನವನ್ನು ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಸಚಿವ ಮುನಿಯಪ್ಪ ಗುರುಪೌರ್ಣಿಮೆ ಪ್ರಯುಕ್ತ ಮಠದ ಸ್ವಾಮೀಜಿಗಳಿಗೆ ಕಾಣಿಕೆ ಅರ್ಪಿಸಿದರು. ಸ್ವಾಮೀಜಿಗಳಿಂದ ಮಠದ ಏಳಿಗೆಗಾಗಿ ಸರ್ಕಾರದಿಂದ ಆಗಬೇಕಾಗಿರುವ ಕಾರ್ಯದ ಮನವಿ ಪತ್ರ ಸ್ವೀಕರಿಸಿದರು.ಮಠದ ಕಿರಿಯ ಸದಾನಂದ ಸ್ವಾಮೀಜಿ, ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಬಯಾಪ ನಿರ್ದೇಶಕ ವಿ.ರಾಮಚಂದ್ರಪ್ಪ, ಪುರಸಭೆ ಸದಸ್ಯರಾದ ಎಂ.ನಾರಾಯಣಸ್ವಾಮಿ, ಎ.ಆರ್.ಹನೀಪುಲ್ಲಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಮುಖಂಡರಾದ ಜೆ.ಎನ್.ಶ್ರೀನಿವಾಸ್, ಜಗಣ್ಣ, ಪುರ ನಂಜುಂಡಪ್ಪ, ಗ್ಯಾಸ್ ಶ್ರೀನಿವಾಸ್, ರಮೇಶ್, ನರಸಿಂಹಮೂರ್ತಿ, ಮಠದ ಭಕ್ತರು ಇದ್ದರು.