ರಾಣಿ ಚೆನ್ನಮ್ಮನ ಹಾದಿಯಲ್ಲಿ ಮಹಿಳೆಯರು ಸಾಧನೆ ಮಾಡಲಿ

| Published : Oct 24 2024, 12:30 AM IST / Updated: Oct 24 2024, 12:31 AM IST

ಸಾರಾಂಶ

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿಸುವಿದರ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿ ಕನ್ನಡ ನಾಡಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದ ದಿನಕ್ಕೆ ಇಂದು 200 ರ ಸಂಭ್ರಮ. ರಾಣಿ ಚೆನ್ನಮ್ಮ ಇಂದಿಗೂ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಸಿರಿಕನ್ನಡ ಪುಸ್ತಕ ಮನೆಯ ಪ್ರಕಾಶಕ ಎಸ್.ಸುಂದರ್ ಹೇಳಿದರು.

ಇಲ್ಲಿನ ಕುವೆಂಪು ರಂಗ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಗಳ ಸಹಯೋಗದಲ್ಲಿ ನಡೆದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ನಮ್ಮೆಲ್ಲರ ಸ್ಪೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮನ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕು. ದೇಶ ಬ್ರಿಟಿಷರಿಂದಾಗಿ 200 ವರ್ಷಗಳ ಕಾಲ ಗುಲಾಮಗಿರಿಯಿಂದ ನಲುಗಿದ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿದರು ಎಂದು ಬಣ್ಣಿಸಿದರು.

ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಗಂಡಿಗೆ ಸಮಾನವಾದ ದಕ್ಷತೆ, ಚಾಣಾಕ್ಷತೆ ಹಾಗೂ ಜಾಣ್ಮೆಯಿಂದ ಹೋರಾಡಿದ್ದರು ಚೆನ್ನಮ್ಮ. ಅದೇ ದಕ್ಷತೆ, ಜಾಣ್ಮೆ ಪ್ರಸ್ತುತ ನಮ್ಮ ಹೆಣ್ಣುಮಕ್ಕಳಲ್ಲಿ ಇದೆಯಾ ಎಂದು ಪುನರಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಹೇಳಿದರು.

ಶೌರ್ಯದ ಜೊತೆ ಕಾರಣ್ಯಮೂರ್ತಿಯಾಗಿದ್ದ ಚೆನ್ನಮ್ಮ. ಯುದ್ಧ ನೈಪುಣ್ಯತೆ ಮತ್ತು ಎಚ್ಚೆತ್ತ ರಾಜಕೀಯ ಪ್ರಜ್ಞೆಯಿಂದಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದ ಎರಡು ಕಣ್ಣಾಗಿದ್ದು ಇವತ್ತಿಗೂ ಕೂಡ ಮಾರ್ಗದರ್ಶಕರಾಗಿದ್ದಾರೆ ಎಂದರು.

ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ದೇಶ್ ಬೇಗೂರು ಮಾತನಾಡಿ, ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ವೀರ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ, ಬ್ರಿಟಿಷರ ವಿರುದ್ದ ಸೆಣೆಸಾಡಿ ವಿಜಯ ಸಾಧಿಸಿದ ದಿನವಿಂದು. ಇಂತಹ ವೀರಮಹಿಳೆಯನ್ನು ಜಾತಿಗೆ ಸೀಮಿತ ಮಾಡುವುದು ಬೇಡ. ಗಾಂಧಿ ಜಯಂತಿ ಮಾದರಿಯಲ್ಲಿ ಶಾಲಾ-ಕಾಲೇಜು ಸೇರಿದಂತೆ ಎಲ್ಲೆಡೆ ಇವರ ಜಯಂತಿ ಆಚರಣೆ ಆಗಬೇಕು. ನಗರದಲ್ಲಿ ಸಮುದಾಯ ಭವನ ನಿರ್ಮಿಸಲು ಜಾಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಸವರಾಜು ಕನಗಲ್ ಮಾತನಾಡಿ ರಾಣಿ ಚೆನ್ನಮ್ಮನ ಜೀವನ ಚರಿತ್ರೆ ಕುರಿತು ತಿಳಿಸಿದರು. ಮುಖಂಡ ಎಚ್.ವಿ.ಮಹೇಶ್ವರಪ್ಪ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಟಿ.ಎಂ.ಕುಮಾರ್ ವಂದಿಸಿದರು. ಮುಖಂಡರಾದ ಎನ್.ಎಸ್.ಕುಮಾರ್, ಚನ್ನಬಸಪ್ಪ, ಮಾಲತೇಶ, ಮಂಜುನಾಥ, ವೈ.ಎಚ್.ನಾಗರಾಜ್, ಶಶಿಕಲ, ಬಸವರಾಜ್, ಇತರರು ಪಾಲ್ಗೊಂಡಿದ್ದರು.