ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆ ನಾಲ್ಕು ಗೋಡೆಗೆ ಸೀಮಿತವಲ್ಲದೇ ಸಮಾಜಮುಖಿಯಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಗಿರೀಶ್ ಕುಮಾರ್ ತಿಳಿಸಿದರು.ತಾಲೂಕಿನ ಸಂಪಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿ.ಸಿ.ಟ್ರಸ್ಟ್ ಹೊಸಳ್ಳಿ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಜ್ಞಾನವಂತರಾಗಬೇಕು, ಸ್ವಾವಲಂಭಿಗಳಾಗಿ ಬದುಕಬೇಕು. ಮಹಿಳೆಯರು ಸ್ವಚ್ಛತೆ, ಶುಚಿತ್ವ, ನೀರಿನ ಸದ್ಬಳಕೆ ಮಾಡಿಕೊಳ್ಳುವಂತೆ ಅದರ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.ರಂಗಭೂಮಿ ಕಲಾವಿದ ಸಂಪಳ್ಳಿ ಬಸವರಾಜ್ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಮ್ಮೂರಿನ ಕೆರೆಯನ್ನು ಹೂಳೆತ್ತಿ ಸ್ವಚ್ಛಗೊಳಿಸಿ ನೀರನ್ನು ತುಂಬಿಸುವ ಕೆಲಸವನ್ನು ಮಾಡುವುದರ ಜೊತೆಗೆ ನಿರ್ಗತಿಕರಿಗೆ ಮನೆ ಕಟ್ಟಿಕೊಡುವುದು, ಅಂಗವಿಕಲರಿಗೆ ಸಲಕರಣೆಗಳನ್ನು ನೀಡುತ್ತಿದ್ದಾರೆ. ಈ ಒಂದು ಸಂಸ್ಥೆ ಹಣಕ್ಕೆ ಸೀಮಿತವಾಗಿಲ್ಲದೆ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದವರಿಂದ ಸ್ವಚ್ಛತೆ, ನೀರಿನ ಸದ್ಬಳಕೆ, ಉಳಿತಾಯ, ಬಾಲ್ಯ ವಿವಾಹ, ಅಸ್ಪೃಶ್ಯತೆ, ಯುಟ್ಯೂಬ್ ಚಾನೆಲ್ ಮುಂತಾದ ವಿಷಯಗಳ ಬಗ್ಗೆ ಹಾಡುಗಳು, ಬೀದಿನಾಟಕದ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.ವೇದಿಕೆಯಲ್ಲಿ ವಲಯದ ಮೇಲ್ವಿಚಾರಕ ಪ್ರಶಾಂತ್, ಸೇವಾ ಪ್ರತಿನಿಧಿ ಸುಮಾರಾಣಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ, ಗ್ರಾಮದ ಮುಖಂಡರಾದ ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಕೃಷ್ಣಪ್ಪ, ಒಕ್ಕೂಟದ ಅಧ್ಯಕ್ಷೆ ಸುನೀತಾ, ಕಲಾವಿದರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಶೇಖರ, ಯರಹಳ್ಳಿ ಹೊನ್ನೇಶ್, ಶಿವಕುಮಾರ್, ಎಚ್.ಬಿ.ರಾಮಕೃಷ್ಣ. ಅನುಸೂಯ ಇದ್ದರು.