ಶೋಷಣೆ ವಿರುದ್ಧ ಮಹಿಳೆಯರು ಹೋರಾಟಕ್ಕೆ ಸಿದ್ಧರಾಗಲಿ: ಎಂ.ಪಿ. ವೀಣಾ ಮಹಾಂತೇಶ

| Published : Mar 11 2024, 01:17 AM IST

ಶೋಷಣೆ ವಿರುದ್ಧ ಮಹಿಳೆಯರು ಹೋರಾಟಕ್ಕೆ ಸಿದ್ಧರಾಗಲಿ: ಎಂ.ಪಿ. ವೀಣಾ ಮಹಾಂತೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಿಗೆ ಮತದಾನ ಹಾಗೂ ಸಮಾನ ಅವಕಾಶ ಕಲ್ಪಿಸಲು ಡಾ. ಬಿ.ಆರ್‌. ಅಂಬೇಡ್ಕರ್‌ ಸಾಕಷ್ಟು ಶ್ರಮಿಸಿದ್ದಾರೆ.

ಹೂವಿನಹಡಗಲಿ: ಮಹಿಳೆಯರ ಮೇಲೆ ಲೈಂಗಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಯುತ್ತಿದ್ದು, ಇವುಗಳ ವಿರುದ್ಧ ಹೋರಾಟ ಮಾಡಲು ಮಹಿಳೆಯರು ಸಿದ್ಧರಾಗಬೇಕಿದೆ ಎಂದು ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಹೇಳಿದರು.

ಇಲ್ಲಿನ ರಂಗಭಾರತಿ ರಂಗ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಮತದಾನ ಹಾಗೂ ಸಮಾನ ಅವಕಾಶ ಕಲ್ಪಿಸಲು ಡಾ. ಬಿ.ಆರ್‌. ಅಂಬೇಡ್ಕರ್‌ ಸಾಕಷ್ಟು ಶ್ರಮಿಸಿದ್ದಾರೆ. ಮಹಿಳೆಯರಿಗಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ಆದರ್ಶ ನಾವು ಮೈಗೂಡಿಸಿಕೊಳ್ಳಬೇಕಿದೆ. ಜತೆಗೆ ಲೋಹಿಯಾ ಅವರ ತತ್ವಗಳು ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ದೊರಕಿಸಿ ಕೊಡಲು ಶ್ರಮಿಸಿದ್ದಾರೆಂದು ಹೇಳಿದರು.

ಸ್ಥಳೀಯ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಶೇ. 50 ರಷ್ಟು ಮಹಿಳೆಯರಿಗೆ ಸ್ಥಾನಮಾನ ಸಿಕ್ಕಿದೆ. ಆದರೆ ಅಧಿಕಾರವನ್ನು ಅವರ ಪತಿ ಮಾಡುತ್ತಾರೆ. ಹೀಗಾದರೆ ಮೀಸಲಾತಿ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಮಹಿಳೆಯರು ಅಧಿಕಾರ ನಿಭಾಯಿಸುವಂತಹ ಪ್ರಯತ್ನಿಸುವ ಜತೆಗೆ ಶಕ್ತಿ ಪಡೆದುಕೊಳ್ಳಬೇಕೆಂದು ಹೇಳಿದರು.

ಮಹಿಳೆ ಮೊದಲು ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣವಾಗಬೇಕಿದೆ. ಆಗ ಸಮಾಜಕ್ಕೆ ಮತ್ತು ಆ ಕುಟುಂಬಕ್ಕೆ ಗೌರವ ಹೆಚ್ಚಾಗುತ್ತದೆ. ಮಹಿಳೆ ಶೋಷಣೆಯ ಸಂಕೋಲೆಯಿಂದ ಹೊರ ಬಂದು ನಿಮಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ಮಹಿಳೆಯನ್ನು ವರ್ಣಭೇದ ನೀತಿಗಿಂತ ಕಡೆಯಾಗಿ ನೋಡಲಾಗುತ್ತಿದೆ. ಅನೇಕ ಕಟ್ಟುಪಾಡುಗಳ ನಡುವೆ ಬದುಕು ನಡೆಸುತ್ತಿದ್ದಾಳೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕೇವಲ ವಸ್ತ್ರ ಸಂಹಿತೆ ಅಷ್ಟೇ ಪರಿಣಾಮ ಬೀರಲ್ಲ, ಬದಲಾಗಿ ಮನುಷ್ಯ ತನ್ನ ನೀತಿ ನಡುವಳಿಕೆ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ಬಿ. ಗಣೇಶ ಮಾತನಾಡಿ, ಮಹಿಳೆಯರಿಗೆ ಮಹಿಳೆ ಶತ್ರುವಲ್ಲ, ಬದಲಾಗಿ ಶಕ್ತಿಯಾಗಿ ಪರಿವರ್ತನೆಯಾಗಬೇಕಿದೆ. ಆ ಕೆಲಸವನ್ನು ಧರ್ಮಸ್ಥಳ ಸಂಘ ಮಾಡಿದೆ. ಇದರಿಂದ ಮಹಿಳೆಯರಿಗೆ ಶಕ್ತಿ ಬಂದಿದೆ ಎಂದರು.

ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ 6.20 ಲಕ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಡಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿವೆ, 59 ಲಕ್ಷ ಕುಟುಂಬಗಳಿವೆ, ಮಹಿಳಾ ಸಂಘಕ್ಕೆ ಕೇವಲ ಆರ್ಥಿಕ ಸಹಾಯ ಮಾಡದೇ ಅವರಿಗೆ ಜ್ಞಾನ ವಿಕಾಸದ ಮೂಲಕ ಮಾರ್ಗದರ್ಶನ, ತಿಳಿವಳಿಕೆ, ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಕಾನೂನು ಅರಿವು, ಸ್ವ ಉದ್ಯೋಗ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಿ ಅವರನ್ನು ಬದಲಾವಣೆಯತ್ತ ಹೆಜ್ಜೆ ಇರಿಸಲಾಗುತ್ತಿದೆ ಎಂದರು.

ಬ್ರಹ್ಮಕುಮಾರಿ ಭಾರತಿ ಮಹಿಳಾ ಶೋಷಣೆ ಹಾಗೂ ಆಕೆಯ ಕುಟುಂಬದ ಜವಾಬ್ದಾರಿಯ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಕೋಡಿಹಳ್ಳಿ ಕೊಟ್ರೇಶ, ಭಾರತೀಯ ಜೈನ ಮಿಲನ್‌ ಅಧ್ಯಕ್ಷ ಸಂತೋಷ ಜೈನ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಸಂಯೋಜನಾಧಿಕಾರಿ ತಿಲಕ್‌ಕುಮಾರ, ಪತ್ರಕರ್ತ ಎಂ. ನಿಂಗಪ್ಪ, ಪರಶುರಾಮ ಇತರರಿದ್ದರು.

ಸಾಧಕಿಯರಾದ ಗಾಯಕಿ ಕಾವ್ಯಾ, ರೇಣುಕಮ್ಮ, ಪದ್ಮಾವತಿ, ಕೆ. ಶಕುಂತಲಾ ಮಾಗಳ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಪಂಚಮಿ ಮಹಿಳಾ ಸ್ವ ಸಹಾಯ ಸಂಘ ಮಾಗಳ, ಮಲ್ಲಿಗೆ ಸಂಘ ಹಡಗಲಿ, ಬೀಬಿ ಫಾತಿಮಾ ಸಂಘ ಹಡಗಲಿ ಈ ಸಂಘದ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು.