ಸಾರಾಂಶ
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದು ಕಾಂಗ್ರೆಸ್. ಬರಗಾಲದಲ್ಲೂ ನಾಲೆಗಳಿಗೆ ನೀರು ಬಿಟ್ಟು ರೈತರನ್ನು ಉಳಿಸಿದ್ದು ನಮ್ಮ ಸರ್ಕಾರ. ಆದರೀಗ ನೀರಿನ ವಿಚಾರವಾಗಿ ರಾಜಕೀಯ ಮಾಡಲಾಗುತ್ತಿದೆ. ತಮಿಳುನಾಡಿಗೆ ಹನಿ ನೀರು ಹೋಗುತ್ತಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದನ್ನೇ ತಪ್ಪಾಗಿ ಅರ್ಥೈಸುತ್ತಿರುವ ಪ್ರತಿಪಕ್ಷಗಳು, ಯೂಟ್ಯೂಬರ್ಸ್ ಹಾಗೂ ಸೋಷಿಯಲ್ ಮೀಡಿಯಾಗಳಿಗೆ ನನ್ನ ಧಿಕ್ಕಾರ.
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ಹನಿ ನೀರು ಹೋಗುತ್ತಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದನ್ನೇ ತಪ್ಪಾಗಿ ಅರ್ಥೈಸುತ್ತಿರುವ ಪ್ರತಿಪಕ್ಷಗಳು, ಯೂಟ್ಯೂಬರ್ಸ್ ಹಾಗೂ ಸೋಷಿಯಲ್ ಮೀಡಿಯಾಗಳಿಗೆ ನನ್ನ ಧಿಕ್ಕಾರ.-ಹೀಗೆಂದು ಹೇಳಿದ್ದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ. ನಗರದ ಮಂಡ್ಯ ವಿವಿ ಆವರಣದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದು ಕಾಂಗ್ರೆಸ್. ಬರಗಾಲದಲ್ಲೂ ನಾಲೆಗಳಿಗೆ ನೀರು ಬಿಟ್ಟು ರೈತರನ್ನು ಉಳಿಸಿದ್ದು ನಮ್ಮ ಸರ್ಕಾರ. ಆದರೀಗ ನೀರಿನ ವಿಚಾರವಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಗಾಲವಿದ್ದಾಗಲೂ ನಾಡನ್ನು ಸಮೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ೨೦೧೮ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ ಶಾಸಕರು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರೆಲ್ಲರೂ ನಾವೇ ಎಂದು ಜೆಡಿಎಸ್‌ನವರು ಬೀಗುತ್ತಿದ್ದರು. ನಮ್ಮನ್ನು ಹೀಯಾಳಿಸುತ್ತಿದ್ದರು. ಆದರೀಗ ಎಲ್ಲವೂ ಉಲ್ಟಾ ಆಗಿದೆ. ಗ್ಯಾರಂಟಿ ಯೋಜನೆಗಳ ಘೋಷಣೆ, ನಮಗಿರುವ ಬದ್ಧತೆಯಿಂದಾಗಿ ನಾವು (ಕಾಂಗ್ರೆಸ್) ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ ಎಂದರು.ಹಿಂದೆ ಅಧಿಕಾರ ನಡೆಸಿದವರು ಬಹಳಷ್ಟು ಸುಳ್ಳು ಹೇಳಿದ್ದಾರೆ. ಆದರೆ, ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಅದರ ವರದಿ ನೀಡಲು ನಾವಿಲ್ಲಿ ಬಂದಿದ್ದೇವೆ. ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ೮ ತಿಂಗಳಲ್ಲೇ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದರು.