ಸಾರಾಂಶ
ಗದಗ: ತತ್ವಜ್ಞಾನಿ, ಶ್ರೇಷ್ಠ ಶಿಕ್ಷಕ, ರಾಷ್ಟ್ರಪತಿಯಾಗಿ ಡಾ. ರಾಧಾಕೃಷ್ಣನ್‌ರವರ ಶಿಸ್ತು, ಶ್ರದ್ಧೆ ನಮಗೆಲ್ಲ ಮಾದರಿಯಾಗಿದೆ. ಶ್ರೇಷ್ಠ ಶಿಕ್ಷಕರಾಗಿ ಸುಭದ್ರ, ಸುಶಿಕ್ಷಿತ ರಾಷ್ಟ್ರ ನಿರ್ಮಿಸೋಣ ಎಂದು ವಿಪ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ಅವರು ಶುಕ್ರವಾರ ಇಲ್ಲಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಹಳ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮಾಡ್ತಿದ್ದೇವೆ. ಫ್ರಾನ್ಸ್ ದೇಶದ ಕೋರ್ಟ್‌ನಲ್ಲಿ ಶಿಕ್ಷಕರ ಹೇಳಿಕೆ ವಿಚಾರಣೆಯನ್ನು ಗೌರವಯುತವಾಗಿ ಕುರಿಸಿ ವಿಚಾರಣೆ ಮಾಡುತ್ತಾರೆ.ದೇಶದ ಭವಿಷ್ಯ ನಾಲ್ಕು ಕೊಠಡಿಗಳ ಒಳಗೆ ನಿರ್ಮಾಣ ಆಗುತ್ತದೆ. ತಾಯಿ ಮಗುವಿಗೆ ಜನ್ಮ ನಿಡುತ್ತಾಳೆ, ಆ ಮಗುವಿನ ಜೀವನ ಉನ್ನತ ಗುಣಮಟ್ಟದಲ್ಲಿ ಸಾಗಲು ಶಿಕ್ಷಕರ ಶ್ರಮ ನಿರಂತರವಾಗಿ ಅಡಗಿರುತ್ತದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ಹಲವು ಪ್ರಯತ್ನ ಮಾಡಬೇಕು ಎಂದರು.
ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗದಗ ಜಿಲ್ಲೆ ಫಲಿತಾಂಶ ಸುಧಾರಣೆ ಅಷ್ಟೇನು ಸಮಾಧಾನಕರವಿಲ್ಲ. ಇನ್ನು ಮುಂದಾದರೂ ಸಹ ಇನ್ನಷ್ಟು ಫಲಿತಾಂಶ ಸುಧಾರಣೆಗೆ ಶಿಕ್ಷಕರು ಹಾಗೂ ನಾವೆಲ್ಲರೂ ಶ್ರಮಿಸೋಣ ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮುಂತಾದವರು ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ಡಾ. ಹರಿಪ್ರಸಾದ್ ಜಿ.ವಿ. ಉಪನ್ಯಾಸ ನೀಡಿದರು. ಡಿಡಿಪಿಐ ಆರ್.ಎಸ್. ಬುರಡಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಡಯಟ್‌ದ ಉಪನಿರ್ದೇಶಕಿ ಮಂಗಳಾ ತಾಪಸ್ಕರ್, ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ಎಸ್.ಬಿ. ಮಸನಾಯಕ, ಗ್ರಾಮೀಣ ಬಿಇಓ ವಿ.ವಿ. ನಡುವಿನಮನಿ, ಗದಗ ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ ಶಹರ ಬಿಇಓ ಆರ್.ವಿ. ಶೆಟ್ಟೆಪ್ಪನವರ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.