ಬ್ಯಾಹಟ್ಟಿ:ವ್ಯಸನಮುಕ್ತ ಸಮಾಜ ನಿರ್ಮಿಸುವುದು ಎಲ್ಲರ ಕರ್ತವ್ಯ. ಎಲ್ಲರೂ ದುಶ್ಚಟಗಳಿಂದ ದೂರವಿದ್ದು, ಸ್ವಾಸ್ಥ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಪಿಎಸ್‌ಐ ಎಸ್‌.ಆರ್‌. ಪಾಟೀಲ ಕರೆ ನೀಡಿದರು.

ಹುಬ್ಬಳ್ಳಿ ತಾಲೂಕಿನ ಕುಸುಗಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ. ವಿಕ್ರಮ್‌ ಸಾರಾಭಾಯಿ ವಿಜ್ಞಾನ ಸಂಘ ಮತ್ತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣಿಗಳ ಸಹಯೋಗದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ವಿಜ್ಞಾನ ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ಮಾತನಾಡಿ, ಮಾದಕ ದ್ರವ್ಯಗಳಾದ ಗಾಂಜಾ, ಹೆರಾಯಿನ್, ಕೊಕೇನ್, ಬ್ರೌನ್ ಶುಗರ್, ನಿಷೇಧಿತ ಮಾತ್ರೆ ಹಾಗೂ ಇತರ ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಹಾಳು ಮಾಡುತ್ತದೆ. ವ್ಯಸನಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲ, ಕುಟುಂಬದ ನೆಮ್ಮದಿ ಮತ್ತು ಸಮಾಜದ ಶಾಂತಿಯೂ ಹದಗೆಡುತ್ತದೆ. ವಿಶೇಷವಾಗಿ ಯುವಜನತೆ ಮಾದಕ ದ್ರವ್ಯಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ಮಾದಕ ದ್ರವ್ಯಗಳ ವ್ಯಸನಿಗಳಾಗದೇ ಯೋಗ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕಿ ಭಾನುಮತಿ ಆಡಗಲ್ಲ, ತಾಲೂಕು ದೈಹಿಕ ನಿರ್ದೇಶಕ ಗುರುನಾಥ ಬರದೇಲಿ ಮಾತನಾಡಿದರು. ಪೊಲೀಸ್‌ ಪೇದೆ ರವಿ ಗಂಗಲ್‌, ಅಮೀರಾಬಾನು ದಲಾಲ, ಎನ್‌.ಎಸ್‌. ಯಲಿಗಾರ, ಸುರೇಶ ನಾಯ್ಕ, ಪ್ರಭಾಕರ ಪತ್ತಾರ, ಪುರಾಣಿಕ, ಜ್ಯೋತಿ ಮೊರಬದ ಉಪಸ್ಥಿತರಿದ್ದರು. ಅಶೋಕ ಶಿರಹಟ್ಟಿ ಸ್ವಾಗತಿಸಿ, ನಿರೂಪಿಸಿದರು, ಸುಭಾಸ ಜಕಾತಿ ವಂದಿಸಿದರು.