ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
12ನೇ ಶತಮಾನದಲ್ಲಿ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದು ಅವರ ಮಾರ್ಗದರ್ಶನದಂತೆ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರು ಸಮಾಜ ಸುಧಾರಣೆಯಲ್ಲಿ ತೊಡಗಿದವರು. ಅವರು ತಿಳಿಸಿದ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಹೆಚ್ಚುವರಿ ತಹಸೀಲ್ದಾರ್ ಜಿ.ವಿ. ಪಾಟೀಲ ಹೇಳಿದರು.ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿವಶರಣರು ಜಾತಿಗೆ ಮಾತ್ರ ಸೀಮಿತವಾಗದೆ ಮಾನವ ಕುಲಕ್ಕೆ ಸೀಮಿತರಾಗಬೇಕು. ಅವರ ತತ್ವಗಳು, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.ಉಪನ್ಯಾಸಕರಾದ ಗುರುನಾಥ ಹಡಪದ ಮಾತನಾಡಿ, ಧಾರವಾಡ ಜಿಲ್ಲೆಯನ್ನು ವಿದ್ಯಾ ಕಾಶಿ ಆದರೆ ವಿಜಯಪುರ ಜಿಲ್ಲೆಯನ್ನು ಶಿವಶರಣರ ಬೀಡು ಎಂದು ಕರೆಯಲಾಗುತ್ತದೆ. ಸಮಾನತೆಯ ಹರಿಕಾರ ಬಸವಣ್ಣನವರ ಹಾದಿಯಲ್ಲೇ ಅವರು ನಡೆದರು. ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಚೆನ್ನಮಲ್ಲಿಕಾರ್ಜುನ ಗುರುಗಳಿಂದ ದೀಕ್ಷೆ ಪಡೆದ ಅವರು ಚಿಕ್ಕ ವಯಸ್ಸಿನಲ್ಲಿಯೇ ಶಿವಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಜೀವನಕ್ಕೆ ಶಿಕ್ಷಣ ಮುಖ್ಯ. ಅವರ ವಚನಗಳು, ಸಿದ್ಧಾಂತಗಳು, ತತ್ವಗಳನ್ನು ಮಕ್ಕಳು ಓದಲು ಮುಂದಾಗಬೇಕು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ಜೀವನಕ್ಕೆ ಪುಸ್ತಕ ಮುಖ್ಯ. ಪುಸ್ತಕದಿಂದ ಜ್ಞಾನ ಹೆಚ್ಚುತ್ತದೆ ಎಂದರು.
ಏಕಾಗ್ರತೆಯಿಂದ ಎಲ್ಲವೂ ಸಾಧ್ಯ. ಕೈಲಾಸ ದೊಡ್ಡದಲ್ಲಾ ಕಾಯಕ ದೊಡ್ಡದು. ಜೀವನದಲ್ಲಿ ಯಾವುದು ಒಳ್ಳೆಯದೋ ಅದನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಪರಿಪೂರ್ಣತೆಯನ್ನು ಪಡೆಯುತ್ತೇವೆ. ಹಡಪದ ಅಪಣ್ಣನವರ ಆದರ್ಶ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಮಾರುತಿ ಹಡಪದ, ಎಫ್.ಎಸ್. ತೆಂಬದಮನಿ, ದೇವರಾಜ ದಾಡಿಬಾವಿ, ಮಹಾರುದ್ರಪ್ಪ ಪಡೆಸೂರ, ಫಕ್ಕಿರೇಶ ಹಡಪದ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.