ಸಹಿ ಸಂಗ್ರಹಿಸಿ ಅಭಿಯಾನ, ಸಹಾಯಕ ಆಯುಕ್ತರ ಮೂಲಕ ಸಿಎಂಗೆ ಮನವಿ
ಕನ್ನಡಪ್ರಭ ವಾರ್ತೆ ಶಿರಸಿಬೇಡ್ತಿ-ಅಘನಾಶಿನಿ ನದ ಜೋಡಣೆ ಯೋಜನೆ ವಿರೋಧಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ನೇತೃತ್ವದಲ್ಲಿ ನಗರದ ಎಸಿ ಕಚೇರಿ ಎದುರುಗಡೆ ಬೃಹತ್ ಪತ್ರ ಚಳವಳಿ ನಡೆಸಿ ಸಹಾಯಕ ಆಯುಕ್ತರ ಮೂಲಕ ಸಿಎಂಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ನೂರಾರು ಸ್ಥಳೀಯ ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಪರಿಸರವಾದಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆ ಖಂಡಿಸಿ ಬೃಹತ್ ಪ್ರತಿಭಟನೆ ಮೂಲಕ ಸಹಿ ಸಂಗ್ರಹಿಸಿ ಅಭಿಯಾನ ನಡೆಸಲಾಯಿತು.ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಂಡು ಪತ್ರ ಚಳವಳಿಗೆ ಸಹಿ ಮಾಡುವ ಮೂಲಕ ಹೋರಾಟ ಬೆಂಬಲಿಸಿ ಮಾತನಾಡಿ, ನದಿ ಜೋಡಣೆ ಯೋಜನೆಯಿಂದ ಆಗುವ ಪರಿಸರ ಹಾನಿ ಹಾಗೂ ಸ್ಥಳೀಯ ಜನಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವ ಜವಾಬ್ದಾರಿ ನಮ್ಮೆ ಲ್ಲರದ್ದಾಗಿದೆ ಎಂದರು.
ಅಲ್ಲದೆ ನಮ್ಮ ಭಾಗದ ನೈಸರ್ಗಿಕ ಸಂಪತ್ತು ಮತ್ತು ನದಿ ಮೂಲಗಳನ್ನು ರಕ್ಷಿಸುವುದು ಶಾಸಕನಾಗಿ ಮಾತ್ರವಲ್ಲ, ಈ ಮಣ್ಣಿನ ಮಗನಾಗಿ ನನ್ನ ಮೊದಲ ಕರ್ತವ್ಯ. ಅಘನಾಶಿನಿ ಮತ್ತು ಬೇಡ್ತಿ ನದಿಗಳ ಜೋಡಣೆಯಿಂದ ಮಲೆನಾಡಿನ ಪರಿಸರ ವ್ಯವಸ್ಥೆಗೆ ಭಾರಿ ಪೆಟ್ಟು ಬೀಳಲಿದೆ ಎಂದು ಹೇಳಿದರು.ಇಂತಹ ಜನವಿರೋಧಿ ಹಾಗೂ ಪರಿಸರ ವಿರೋಧಿ ಯೋಜನೆಯನ್ನು ನಾನು ಈ ಹಿಂದೆಯೂ ಶಾಸನಸಭೆಯ ಒಳಗಡೆ ತೀವ್ರವಾಗಿ ವಿರೋಧಿಸಿದ್ದೇನೆ. ಈಗ ಸಾರ್ವಜನಿಕರೊಂದಿಗೆ ಬೀದಿಗಿಳಿದು ಹೋರಾಡಲೂ ಸಿದ್ಧನಿದ್ದೇನೆ. ಸಾರ್ವಜನಿಕರ ಮತ್ತು ಪರಿಸರದ ಹಿತಾಶಕ್ತಿಗೆ ಧಕ್ಕೆ ತರುವ ಯಾವುದೇ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಜನರ ಭಾವನೆಗಳಿಗೆ ಸ್ಪಂದಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಈ ನದಿ ಜೋಡಣೆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಇಲ್ಲವಾದಲ್ಲಿ ಈ ಒಂದು ಹೋರಾಟ ದೇಶ ವ್ಯಾಪಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು, ಸಂಘ-ಸಂಸ್ಥೆಗಳು, ಮಾತೃ ಮಂಡಳಿಯವರು, ಪರಿಸರವಾದಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.