ಕೊಂಕಣ ರೈಲ್ವೆ ಶೇರು ವಾಪಸ್‌ಗೆ ಸಿಎಂಗೆ ಪತ್ರ : ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

| N/A | Published : Jan 31 2025, 12:49 AM IST / Updated: Jan 31 2025, 12:06 PM IST

ಕೊಂಕಣ ರೈಲ್ವೆ ಶೇರು ವಾಪಸ್‌ಗೆ ಸಿಎಂಗೆ ಪತ್ರ : ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಮಾತನಾಡಿ, ಸುರತ್ಕಲ್‌ ರೈಲ್ವೆ ಮೇಲ್ಸೇತುವೆ ಹಳೆಯದಾಗಿದ್ದು, ಅದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ಕಾಮಗಾರಿಗೆ ಅನುದಾನದ ಅವಶ್ಯಕತೆ ಇದೆ. ಸುರತ್ಕಲ್‌ ರೈಲು ನಿಲ್ದಾಣದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬೇಕಾಗಿದೆ ಎಂದರು.

  ಮಂಗಳೂರು : ಭಾರತೀಯ ರೈಲ್ವೆ ಜೊತೆಗೆ ವಿಲೀನಗೊಳಿಸುವ ಸಲುವಾಗಿ ಕೊಂಕಣ ರೈಲ್ವೆಯ ಶೇರುಗಳನ್ನು ಬಿಟ್ಟುಕೊಡುವಂತೆ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮಂಗಳೂರು ಹೊರವಲಯದ ಸುರತ್ಕಲ್‌ ರೈಲು ನಿಲ್ದಾಣದಲ್ಲಿ 1.49 ಕೋಟಿ ರು.ಗಳ ಫ್ಲ್ಯಾಟ್‌ಫಾರಂ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗೆ ಉದ್ದೇಶಿಸಿದರೂ ಮಂಗಳೂರು ಪ್ರದೇಶ ಕೊಂಕಣ ಮತ್ತು ಎಚ್‌ಎಂಆರ್‌ಡಿಸಿ(ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ)ಮಧ್ಯೆ ಸಿಲುಕಿದೆ. 

ಆಡಳಿತಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಲು ಕಷ್ಟವಾಗಿರುವ ಕಾರಣ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸಲು ಕರಾವಳಿಯ ಜನಪ್ರತಿನಿಧಿಗಳು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳ ಜೊತೆ ಮಾತುಕತೆ ನಡೆಸಲಾಗಿದೆ. ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಂಸದರು ಕೂಡ ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರುಗಳಿಗೆ ಪತ್ರ ಬರೆದಿದ್ದು, ವಿಲೀನ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದ್ದಾರೆ.

 ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರ ಹೂಡಿರುವ ತನ್ನ ಪಾಲಿನ ಮೊತ್ತವನ್ನು ವಾಪಸ್‌ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ತ್ವರಿತವಾಗಿ ಕ್ರಮ ಕೈಗೊಂಡರೆ ವಿಲೀನ ಪ್ರಕ್ರಿಯೆಯ ಮುಂದಿನ ಹಂತ ಸುಗಮವಾಗಿ ನಡೆಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜನತೆ ಕೂಡ ರಾಜ್ಯ ಸರ್ಕಾರಕ್ಕೆ ಒತ್ತಡ ತರುವ ಪ್ರಯತ್ನ ನಡೆಸಬೇಕಾಗಿದೆ ಎಂದರು. 

ಫರ್ನಾಂಡಿಸ್‌ ಕನಸು ನನಸು: ಹೆಚ್ಚೇನೂ ಮೂಲಭೂತ ಸೌಕರ್ಯಗಳು ಇಲ್ಲದ ಅಂದಿನ ಕಾಲದಲ್ಲಿ ರೈಲ್ವೆ ಸಚಿವರಾಗಿದ್ದ ಜಾರ್ಜ್‌ ಫರ್ನಾಂಡಿಸ್‌ ಅವರು ಕೊಂಕಣ ರೈಲ್ವೆಗೆ ಕಾರಣಕರ್ತರು. ಭವಿಷ್ಯದಲ್ಲಿ ರೈಲು ಹಳಿ ಡಬ್ಲಿಂಗ್‌ಗೂ ಸಾಧ್ಯವಾಗುವಂತೆ ಆಗಲೇ ಸ್ಥಳಾವಕಾಶ ಮಾಡಿರುವದನ್ನು ಕೊಂಕಣ ಹಳಿ ನಿರ್ಮಿಸಿದ ಎಂಜಿನಿಯರ್‌ ಶ್ರೀಧರನ್‌ ಪಿಳ್ಳೆ ಹೇಳಿದ್ದರು. ಬಹುಕಾಲದ ಬೇಡಿಕೆಯಾದ ಸುರತ್ಕಲ್‌ ಮತ್ತು ಮೂಲ್ಕಿ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯ ಈಗ ನೆರವೇರುತ್ತಿದೆ.

 ಸುಮಾರು 1.49 ಕೋಟಿ ರು.ಗಳಲ್ಲಿ ಸುರತ್ಕಲ್‌ ನಿಲ್ದಾಣದ ಫ್ಲ್ಯಾಟ್‌ಫಾರಂ ವಿಸ್ತರಣೆ ಹಾಗೂ ಮೇಲ್ಛಾವಣಿ ನಿರ್ಮಾಣ, ಅದೇ ರೀತಿ ಮೂಲ್ಕಿಯ ರೈಲು ನಿಲ್ದಾಣದಲ್ಲೂ 1.42 ಕೋಟಿ ರು. ಸೇರಿ ಒಟ್ಟು 3.63 ಕೋಟಿ ರು. ವೆಚ್ಚದಲ್ಲಿ ಫ್ಲ್ಯಾಟ್‌ಫಾರಂ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು. ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಮಾತನಾಡಿ, ಸುರತ್ಕಲ್‌ ರೈಲ್ವೆ ಮೇಲ್ಸೇತುವೆ ಹಳೆಯದಾಗಿದ್ದು, ಅದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ಕಾಮಗಾರಿಗೆ ಅನುದಾನದ ಅವಶ್ಯಕತೆ ಇದೆ. ಸುರತ್ಕಲ್‌ ರೈಲು ನಿಲ್ದಾಣದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬೇಕಾಗಿದೆ ಎಂದರು. 

ಕೊಂಕಣ ರೈಲ್ವೆ ಕಾರವಾರ ಪ್ರಾದೇಶಿಕ ವಿಭಾಗದ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಮಾತನಾಡಿ, ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಫ್ಲ್ಯಾಟ್‌ಫಾರಂಗೆ 56.07 ಲಕ್ಷ ರು., ಶೆಲ್ಟರ್‌ಗೆ 119.19 ಲಕ್ಷ ರು., ಮೂಲ್ಕಿಯಲ್ಲಿ ಫ್ಲ್ಯಾಟ್‌ಫಾರಂಗೆ 45.54 ಲಕ್ಷ ರು., ಶೆಲ್ಟರ್‌ಗೆ 123.35 ಲಕ್ಷ ರು. ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿಗೆ 18.95 ಲಕ್ಷ ರು. ವೆಚ್ಚವಾಗಲಿದೆ ಎಂದರು.

ಈ ಸಂದರ್ಭ ಪಾಲಿಕೆ ಸ್ಥಳೀಯ ಸದಸ್ಯೆ ಸರಿತಾ, ಕಾರವಾರ ವಿಭಾಗದ ಡೆಪ್ಯೂಟಿ ಚೀಫ್‌ ಎಂಜಿನಿಯರ್‌ ವಿಜಯ್‌ ಕುಮಾರ್‌, ಕೊಂಕಣ್‌ ರೈಲ್ವೆ ಹಿರಿಯ ಪ್ರಾದೇಶಿಕ ಸಂಚಾರಿ ವ್ಯವಸ್ಥಾಪಕ ದಿಲೀಪ್ ಡಿ.ಭಟ್‌, ಹಿರಿಯ ಎಂಜಿನಿಯರ್‌ ಗೋಪಾಲಕೃಷ್ಣನ್‌, ಡೆಪ್ಯೂಟಿ ಚೀಫ್‌ ಮೆಡಿಕಲ್‌ ಆಫೀಸರ್‌ ಡಾ.ಸ್ಟೀವನ್‌ ಜಾರ್ಜ್‌, ಹಿರಿಯ ಸಿಗ್ನಲ್‌ ಮತ್ತು ಟೆಲಿಕಮ್ಯುನಿಕೇಷನ್ಸ್‌ ಎಂಜಿನಿಯರ್‌ ಸುದರ್ಶನ್‌ ರೆಡ್ಡಿ, ಎಟಿಎಂ ಜಿ.ಡಿ.ಮೀನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮತ್ತಿತರರಿದ್ದರು.

ಮೂಲ್ಕಿ, ಸುರತ್ಕಲ್‌ ರೈಲು ನಿಲ್ದಾಣ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ: ಸಂಸದ ಚೌಟ

ಮೂಲ್ಕಿ: ಮೂಲ್ಕಿ ಮತ್ತು ಸುರತ್ಕಲ್‌ ರೈಲು ನಿಲ್ದಾಣ ದ.ಕ. ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು ಮುಂದಿನ ದಿನಗಳಲ್ಲಿ ಎರಡೂ ರೈಲು ನಿಲ್ದಾಣಗಳನ್ನು ಹಂತ ಹಂತವಾಗಿ ಅಭಿವೃದ್ದಿ ಪಡಿಸಲಾಗುವುದು. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇ ಜೊತೆ ವಿಲೀನಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

ಮೂಲ್ಕಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಅಭಿವೃದ್ಧಿ ಹಾಗೂ ಸಂಪರ್ಕ ರಸ್ತೆ ದುರಸ್ತಿ ಸೇರಿದಂತೆ ಸುಮಾರು 1.87 ಕೋಟಿ ರು. ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಮೂಲ್ಕಿ ರೈಲು ನಿಲ್ದಾಣದ ಅಭಿವೃದ್ಧಿಗೆ ಪೂರಕವಾಗಿ ನಿಲ್ದಾಣದ ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ಶಿರಾಡಿ ಘಾಟ್ ಬಳಿ ರೈಲ್ವೇ ಹಳಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದು ಸಂಸದ ಚೌಟ ತಿಳಿಸಿದರು.ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಅಭಿವೃದ್ದಿ ಕಾಮಗಾರಿಯಲ್ಲಿ ರೈಲ್ವೇ ಇಲಾಖೆ ಯಾವುದೇ ತಕರಾರು ಮಾಡದೆ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕೊಂಕಣ ರೈಲ್ವೇ ಪ್ರಾಂತ್ಯ ಪ್ರಬಂಧಕಿ ಆಶಾ ಶೆಟ್ಟಿ, ಪಿಆರ್‌ಒ ಸುಧಾ ಕೃಷ್ಣಮೂರ್ತಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ, ಉದ್ಯಮಿ ಅರವಿಂದ ಪೂಂಜಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ನಾಯಕರಾದ ಸತೀಶ್ ಭಟ್ ಕೊಳುವೈಲು, ದಿನೇಶ್ ಪುತ್ರನ್ ಬಳ್ಕುಂಜೆ ಮತ್ತಿತರರು ಉಪಸ್ಥಿತರಿದ್ದರು.