ಸಾರಾಂಶ
- "ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹ "ದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಕುವಂತಹ ಹಾಲನ್ನು ದೇವರ ಸ್ವರೂಪರಾದ ಮಕ್ಕಳಿಗೆ ನೀಡಿ. ಇದರಿಂದ ಪೌಷ್ಟಿಕ ಆಹಾರ ಪದಾರ್ಥ ವ್ಯರ್ಥವಾಗೋದು ತಪ್ಪಿದಂತಾಗುತ್ತದೆ. ಹಬ್ಬಕ್ಕೂ ಸಾರ್ಥಕತೆ ಬರುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.
ಬುಧವಾರ ಇಲ್ಲಿನ ಕೊಂಡಜ್ಜಿ ರಸ್ತೆಯ ಆರ್‌ಟಿಒ ಕಚೇರಿ ಸಮೀಪದ ಪಿ.ಎಲ್.ಇ. ಟ್ರಸ್ಟ್‌ನ ಬಿಜೆಎಂ ಸ್ಕೂಲ್ ಮತ್ತು ಜಿಎನ್‌ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮ, ನಾಗರ ಪಂಚಮಿ ಪ್ರಯುಕ್ತ 26ನೇ ವರ್ಷದ "ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹ " ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇವರ ಹೆಸರಲ್ಲಿ ಹಾಲು ವ್ಯರ್ಥ ಮಾಡದೇ ಅದೇ ಹಾಲನ್ನು ನೇವೈದ್ಯದಂತೆ ಸಮರ್ಪಿಸಿ, ಇನ್ನುಳಿದ ಹಾಲನ್ನು ಅಶಕ್ತರು, ಕುಷ್ಠರೋಗಿ ಮಕ್ಕಳು, ಬಡವರು ಇಲ್ಲವೇ ನಮ್ಮ ಮಕ್ಕಳಿಗೆ ನೀಡುವಂತಾಗಬೇಕು. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ನಾಗರ ಪಂಚಮಿಯನ್ನು ಮಕ್ಕಳ ಪಂಚಮಿಯನ್ನಾಗಿ ಆಚರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಶಾಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಮಕ್ಕಳು ಇರುತ್ತಾರೆ. ನಾಗರ ಪಂಚಮಿಯನ್ನು ಮಕ್ಕಳ ಪಂಚಮಿಯಾಗಿ ಆಚರಿಸುವುದರಿಂದ ಎಲ್ಲರಲ್ಲೂ ಭ್ರಾತೃತ್ವ ಬೆಳೆಯುತ್ತದೆ. ನಮ್ಮ ಪೂರ್ವಜರು ಆಯಾ ಕಾಲಕ್ಕೆ ಅನುಗುಣವಾಗಿ ಹಬ್ಬಗಳ ಆಚರಣೆ ಮಾಡಿದವರು. ಯುಗಾದಿಯಲ್ಲಿ ಇಡೀ ಪ್ರಕೃತಿ ಹೊಸ ಜೀವಕಳೆಯಿಂದ ತುಂಬಿರುತ್ತದೆ. ಹಾಗಾಗಿ, ಹೊಸ ವರ್ಷದ ಸಂಕೇತವಾಗಿ ಯುಗಾದಿ ಆಚರಣೆ ಮಾಡಿದರು. ದೀಪಗಳ ಬೆಳಗಿಸಿ ಕತ್ತಲೆ ದೂರ ಮಾಡುವ ಸಂದೇಶದೊಂದಿಗೆ ದೀಪಾವಳಿ ಆಚರಿಸಿದರು.ಬಾಗಿನ ಪದ್ಧತಿ ಮಾರ್ಪಡಿಸಿದ್ದೇವೆ:
ನಾವೂ ಸಹ ಕೂಡಲ ಸಂಗಮದಲ್ಲಿ ಬೆಲೆ ಬಾಳುವ ಸೀರೆ, ಬಟ್ಟೆ, ಇತರೆ ಧಾನ್ಯಗಳನ್ನು ನದಿಗೆ ಬಾಗಿನ ನೀಡುವ ಪದ್ಧತಿ ಮಾರ್ಪಡಿಸಿದ್ದೇವೆ. ಅವುಗಳನ್ನೇ ರೈತ ಮಹಿಳೆಯರಿಗೇ ಬಾಗಿನ ರೀತಿ ಅರ್ಪಿಸುವ ಕೆಲಸ ಪ್ರಾರಂಭಿಸಿದ್ದೇವೆ. ಪ್ರತಿವರ್ಷ 51 ರೈತ ಮಹಿಳೆಯರಿಗೆ ಬಾಗಿನ ಅರ್ಪಣೆ ಮಾಡಲಾಗುತ್ತಿದೆ. ಸ್ವಾಮೀಜಿಗಳು ಭಕ್ತಾದಿಗಳಿಗೆ ಯಾವುದನ್ನೂ ಚೆಲ್ಲಬಾರದು, ವ್ಯರ್ಥ ಮಾಡಬಾರದು ಎಂದು ಹೇಳುವಂತೆ ಆಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರಜಾಪ್ರಭುತ್ವದ ಮಾಹಿತಿ ನೀಡುವ, ನಾಯಕತ್ವ ರೂಪಿಸುವ ಮುಂದಿನ ದಿನಗಳಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪಿತವಾಗುತ್ತಾರೆ. ವಿದ್ಯಾರ್ಥಿ ದೆಸೆಯಿಂದ ಶಿಸ್ತು ಅತಿ ಮುಖ್ಯ. ಶಿಸ್ತು, ಶಾಂತಿ, ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು. ಸಂಸತ್ ಭವನದಲ್ಲಿ ಕಲಾಪ ನಡೆಯುವ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಬೆಳೆಸುವಲ್ಲಿ ಶಿಕ್ಷಕರು ಗಮನ ನೀಡಬೇಕು. ಶಾಲೆಯಲ್ಲಿ ಏನು ಪಾಠ ಮಾಡಿದ್ದಾರೆ, ಕಲಿಸಿದ್ದಾರೆ ಎಂಬುದು ಪುನರ್ ಮನನ ಮಾಡಬೇಕು. ಮಕ್ಕಳು ಸಹ ಚೆನ್ನಾಗಿ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ್, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಎಲ್.ಎಚ್. ಸಾಗರ್, ಚನ್ನಬಸವನ ಗೌಡ, ಪಿಎಲ್‌ಇ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಗಡಿ, ಜ್ಯೋತಿ ಉಪಾಧ್ಯಾಯ, ರುದ್ರಮ್ಮ ಇತರರು ಇದ್ದರು.- - - -7ಕೆಡಿವಿಜಿ38ಃ:
ದಾವಣಗೆರೆಯ ಬಿಜೆಎಂ ಶಾಲೆಯಲ್ಲಿ ಬುಧವಾರ ನಡೆದ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಕ್ಕಳಿಗೆ ಹಾಲು, ಬ್ರೆಡ್ ವಿತರಿಸಿದರು. -7ಕೆಡಿವಿಜಿ39ಃ:ದಾವಣಗೆರೆಯ ಬಿಜೆಎಂ ಶಾಲೆಯಲ್ಲಿ ಬುಧವಾರ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.