ಸಾರಾಂಶ
ರಾಣಿಬೆನ್ನೂರು: ಮಹಾತ್ಮರು ಪರಮಾತ್ಮನನ್ನು ತಮ್ಮಲ್ಲಿ ಲೀನ ಮಾಡಿಕೊಂಡಿದ್ದು, ಅವರನ್ನು ಆರಾಧನೆ ಮಾಡುವ ಮೂಲಕ ಮುಕ್ತಿ ಕಾಣಬೇಕಾಗಿದೆ ಎಂದು ಚಿಕ್ಕೋಡಿಯ ಜೋಡಕುರಳಿಯ ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ತಾಲೂಕಿನ ಐರಣಿ ಹೊಳೆಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುರು ಮುಪ್ಪಿನಾರ್ಯ ಸ್ವಾಮೀಜಿಯ ಪುಣ್ಯಾರಾಧನೆ, ಬಸವರಾಜ ದೇಶಿಕೇಂದ್ರ ಸ್ವಾಮೀಜಿಯ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಮಹಾತ್ಮರು ಎಂದು ಹುಟ್ಟುವುದಿಲ್ಲ. ಎಂದೂ ಸಾಯುವುದಿಲ್ಲ. ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ಮಹಾತ್ಮರ ವಚನಗಳನ್ನು ನೆನೆಯುತ್ತಿದ್ದೇವೆ. ಹೀಗಾಗಿ ಮಹಾತ್ಮರು ಎಂದು ಸತ್ತಿಲ್ಲ. ನಾವು ಇದ್ದು ಸತ್ತ ಹಾಗೆ. ಹೀಗಾಗಿ ಮಹಾತ್ಮರ ಆರಾಧನೆ ಮಾಡಬೇಕಾಗಿದೆ. ಸಿದ್ದಾರೂಢರು ಅವತಾರ ಎತ್ತಿ, ಕೆಟ್ಟ ಬುದ್ಧಿಯನ್ನು ಸುಟ್ಟರು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಹುಬ್ಬಳ್ಳಿಯಲ್ಲಿ ದೊಡ್ಡ ಮಹಾದ್ವಾರ ನಿರ್ಮಾಣ ಮಾಡಿದ ಕೀರ್ತಿ ಈ ಐರಣಿ ಮಠಕ್ಕೆ ಸಲ್ಲುತ್ತದೆ. ಅಪಾರ ಭಕ್ತ ಸಮೂಹವನ್ನು ಹೊಂದಿರುವ ಮಠ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಿದೆ. ಸಾಮೂಹಿಕ ವಿವಾಹವಾದ ದಂಪತಿಗಳು ನೂರಾರು ಕಾಲ ಸುಖವಾಗಿ ಬಾಳಲಿ ಎಂದರು.ಮಠದ ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿ, ಕುಳ್ಳೂರು ಗುರು ಶಿವಯೋಗಿಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ, ಹದಡಿ ಚಂದ್ರಗಿರಿಮಠದ ಮುರಳಿಧರ ಸ್ವಾಮೀಜಿ, ಜಡೆ ಸಿದ್ದೇಶ್ವರ ಆಶ್ರಮದ ಶಿವಾನಂದ ಸ್ವಾಮೀಜಿ, ಮಠದ ಬಾಲಯೋಗಿ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಹರಿಹರದ ವಿವೇಕಾನಂದ ಸ್ವಾಮೀಜಿ, ಹುಬ್ಬಳ್ಳಿಯ ಸಿದ್ದಾರೂಢಮಠದ ಛರ‍್ಮನ್ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿ ಸಿದ್ದನಗೌಡ ಪಾಟೀಲ, ಬಾಬಣ್ಣ ಶೆಟ್ಟರ ಮತ್ತಿತರರಿದ್ದರು.