ಸಾರಾಂಶ
ಹಾವೇರಿ: ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥ. ನಮ್ಮ ನಡೆ ನುಡಿಗಳು ಸತ್ಯದ ಪರವಾಗಿರಬೇಕು. ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆಗೊಳ್ಳಲು ಸಾಧ್ಯವಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ನೆಗಳೂರು ಹಿರೇಮಠದಲ್ಲಿ ಭಾನುವಾರ ಕರ್ತೃ ಗುರುಶಾಂತೇಶ್ವರ ಮಂದಿರದ ನೂತನ ಗೋಪುರ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಯಾವುದೋ ಒಂದು ಒಳ್ಳೆಯ ಕಾರ್ಯ ಮಾಡುವಾಗ ತೊಡಕು ತೊಂದರೆಗಳು ಬರಬಹುದು. ಅನೇಕ ಮಹಾತ್ಮರಿಗೂ ಸಜ್ಜನರಿಗೂ ತೊಂದರೆಗಳು ಬಿಟ್ಟಿಲ್ಲ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿಯಿದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ. ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಸಂಪತ್ತು ಮತ್ತು ಬಯಕೆ ಹೊಂದಿರುವ ಮನುಷ್ಯ ಮೊದಲು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ನಿರೂಪಿಸಿದ್ದಾರೆ. ಸಮಾಜದಲ್ಲಿ ಆಗುವ ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹ ಸಮಾರಂಭಗಳ ಅವಶ್ಯಕತೆಯಿದೆ. ನೂತನ ದಂಪತಿ ಬಾಳು ಉಜ್ವಲವಾಗಲೆಂದು ಶುಭ ಹಾರೈಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸತಿ ಪತಿಗಳು ಜೀವನದಲ್ಲಿ ಸುಖ ಬರಲಿ, ಕಷ್ಟ ಬರಲಿ ಯಾವಾಗಲೂ ಸಾಮರಸ್ಯದಿಂದ ಬಾಳಬೇಕಾಗುತ್ತದೆ. ಮುತ್ತೈದೆಯರಿಗೆ ವೀರಶೈವ ಪಂಚ ಪೀಠಗಳು ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗುನತ್ತು ಮತ್ತು ಮಾಂಗಲ್ಯ ಕೊಟ್ಟು ಶುಭ ಹಾರೈಸಿದ್ದನ್ನು ಎಂದಿಗೂ ಮರೆಯಲಾಗದು. ಪವಿತ್ರವಾದ ಗೃಹಸ್ಥಾಮಕ್ಕೆ ಪಾದಾರ್ಪಣೆ ಮಾಡಿದ ನವ ದಂಪತಿ ಬಾಳು ಉಜ್ವಲವಾಗಲಿ ಎಂದು ಬಯಸಿ ಶ್ರೀ ರಂಭಾಪುರಿ ಜಗದ್ಗುರುಗಳ ಅಶೀರ್ವಾದ ಯಾವಾಗಲೂ ನಮಗೆ ಶ್ರೀರಕ್ಷೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ೪೦ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ನಡೆಯಿತು. ಸಮಾರಂಭದ ನೇತೃತ್ವ ವಹಿಸಿದ್ದ ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಗುರು ಶಕ್ತಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಗುರು ಕಾರುಣ್ಯವೊಂದಿದ್ದರೆ ಏನೆಲ್ಲ ಸೌಭಾಗ್ಯ ಸಂಪತ್ತು ಪಡೆಯಲು ಸಾಧ್ಯ. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶ್ರೀಗಳು ಪರಿಶ್ರಮ ಮತ್ತು ಸಾಧನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.ಅಂಗೂರು ಶಿವಯೋಗೀಶ್ವರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ತುಪ್ಪದಕುರಹಟ್ಟಿ ಡಾ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಕುಂದಗೋಳದ ಶಿತಿಕಂಠೇಶ್ವರ ಶಿವಾಚಾರ್ಯರು, ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಹಾವೇರಿ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಬೆಳಗುಂಪ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಕುಂದರಗಿ ವೀರಸಂಗಮೇಶ್ವರ ಶಿವಾಚಾರ್ಯರು, ಹಾವನೂರು ಶಿವಕುಮಾರ ಸ್ವಾಮೀಜಿ ಪಾಲ್ಗೊಂಡಿದ್ದರು.