ಸಾರಾಂಶ
ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟು ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಪತಿಗೆ ಇಲ್ಲಿನ ಅಪರ ಮತ್ತು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಶ್ರೀಕಾಂತ್ ಜೀವಾವದಿ ಶಿಕ್ಷೆ ಮತ್ತು ₹6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟು ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಪತಿಗೆ ಇಲ್ಲಿನ ಅಪರ ಮತ್ತು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಶ್ರೀಕಾಂತ್ ಜೀವಾವದಿ ಶಿಕ್ಷೆ ಮತ್ತು ₹6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಪಟ್ಟಣದ ಮುಡಿಗುಂಡ ಬಡಾವಣೆಯ ಕೊಪ್ಪಾಳಿ ನಾಯಕ ಎಂಬುವರ ಪುತ್ರ ಕುಮಾರ್ ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ. ಈತನ ಪತ್ನಿ ಚೆನ್ನಮ್ಮ ಈತನಿಂದ ಕೊಲೆಯಾಗಿದ್ದ ದುರ್ದೈವಿ. ಅಪರಾಧಿಯು ಕಳೆದ ಹತ್ತು ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಚಿನ್ನಮ್ಮಳ ಜೊತೆ ವಿವಾಹವಾಗಿದ್ದು ತನ್ನ ಪತ್ನಿ ಚಿನ್ನಮ್ಮಳ ಶೀಲ ಶಂಕಿಸಿ ಆಗಿಂದಾಗ್ಗೆ ಗಲಾಟೆ ಮಾಡುತ್ತಿದ್ದ. ದೈಹಿಕವಾಗಿಯೂ ಹಲವಾರು ಬಾರಿ ಹಲ್ಲೆ ನಡೆಸಿದ್ದ ಈತನ ವರ್ತನೆಗೆ ಬೇಸತ್ತು ತವರು ಮನೆಯಲ್ಲಿದ್ದ ಪತ್ನಿ ತವರು ಮನೆಗೆ ಹೋಗಿದ್ದಳು.
ಅಪರಾಧಿ ಕುಮಾರ್ ಮುಳ್ಳೂರುಗೆ ಹೋಗಿ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಚಿನ್ನಮ್ಮಳ ತಂದೆ ತಾಯಿಗೆ ತಿಳಿಸಿ 2022ರ ಮಾರ್ಚ್ 31ರಂದು ಮುಡಿಗುಂಡಕ್ಕೆ ಕರೆ ತಂದಿದ್ದ. ಮತ್ತೆ ಹೆಂಡತಿ ಶೀಲದ ಮೇಲೆ ಅನುಮಾನಪಟ್ಟು ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ 2022 ಏಪ್ರಿಲ್ 1ರಂದು ಬೆಳಗಿನ ಜಾವ 4-15ಕ್ಕೆ ಕೊಲೆ ಮಾಡಿದ್ದ. ಕೊಲೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದ ಪುತ್ರ ದರ್ಶನ್ ನನ್ನು ಅಪರಾಧಿ ರೂಂನಲ್ಲಿ ಕೂಡಿ ಹಾಕಿದ್ದ. ಈ ಸಂಬಂಧ ದೂರು ದಾಖಲಾಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಈ ಕೇಸಿನ ವಾದವನ್ನು ಸರ್ಕಾರಿ ವಕೀಲ ಬಿ.ಪಿ.ಮಂಜುನಾಥ್ ಮತ್ತು ಸಿ.ಬಿ.ಗಿರೀಶ್ ರವರು ವಾದ ಮಂಡಿಸಿ ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶರಾದ ಶ್ರೀಕಾಂತ್ ಜೀವಾವದಿ ಶಿಕ್ಷೆ ಮತ್ತು ₹6 ಸಾವಿರ ದಂಡ ಜೊತೆಗೆ ಅಪರಾಧಿ ಪುತ್ರ ದರ್ಶನ್ ಮೈನರ್ ಆಗಿರುವ ಹಿನ್ನೆಲೆ ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರ ಸೂಕ್ತ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.