ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಶ್ರೀ ಕ್ಷೇತ್ರ ಸಾಲೂರು ಮಠದ ಶಿಕ್ಷಣ ಸಂಸ್ಥೆಯೊಂದಿಗೆ ಐತಿಹಾಸಿಕ ₹4.77 ಕೋಟಿ ಒಡಂಬಡಿಕೆಗೆ ಎಚ್ಎಎಲ್ ಸಮೂಹ ಸಹಿ ಹಾಕಿದೆ. ಸಾಲೂರು ಮಠದ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಮತ್ತು ಧಾರ್ಮಿಕ ಪರಂಪರೆಯ ಆದರ್ಶಮಯ ಸಮ್ಮಿಲನ ಒಂದರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಒಂದು ಒಡಂಬಡಿಕೆ ಪತ್ರದ (ಮೆಮೊರೆಂಡಂ ಆಫ್ ಅಂಡರ್ಸ್ಟಾಂಡಿಂಗ್ - ಎಂಒಯು) ಮೂಲಕ ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುವ ಸಲುವಾಗಿ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ₹4.77 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲು ಒಪ್ಪಂದಕ್ಕೆ ಸಹಿ ಮಾಡಲಾಗಿದೆ.ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಾಡಿನ ದಾರಿಯಲ್ಲಿ, ಬೆಟ್ಟಗಳನ್ನೇರಿ ವಿದ್ಯಾಭ್ಯಾಸಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ಅನಿವಾರ್ಯತೆ ಇದೆ. ಈ ಕಷ್ಟದಿಂದಾಗಿ ಮತ್ತು ಶೈಕ್ಷಣಿಕ ಅವಕಾಶಗಳ ಕೊರತೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಆದರೆ, ಈಗ ನಿರ್ಮಾಣಗೊಳ್ಳಲಿರುವ ನೂತನ ವಸತಿ ನಿಲಯ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿದೆ ಎಂದರು. ಈ ಒಡಂಬಡಿಕೆ ಪತ್ರಕ್ಕೆ ಅಧಿಕೃತವಾಗಿ ಆಗಸ್ಟ್ 1, 2025ರಂದು ಎಚ್ಎಎಲ್ ಮತ್ತು ಶ್ರೀ ಸಾಲೂರು ಮಠದ ಪಟ್ಟದ ಶ್ರೀ ಗುರುಸ್ವಾಮಿಯವರ ಪರಂಪರೆಯನ್ನು ಮುಂದುವರಿಸುತ್ತಾ, ಶಿಕ್ಷಣ ಸಂಸ್ಥೆಗಳ ನೇತೃತ್ವವಹಿಸಿರುವ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಹಿ ಹಾಕಿದರು. ಈ ಸಹಯೋಗ ಶಿಕ್ಷಣದ ಮೂಲಕ ಭವಿಷ್ಯದ ತಲೆಮಾರುಗಳನ್ನು ಉನ್ನತಿಗೊಳಿಸುವ ಆಧ್ಯಾತ್ಮಿಕ ಮತ್ತು ಅಭಿವೃದ್ಧಿ ಸಹಭಾಗಿತ್ವದ ಸಂಕೇತವಾಗಿದೆ.ಐತಿಹಾಸಿಕ ಶ್ರೀ ಸಾಲೂರು ಮಠದಲ್ಲಿ ಸಹಿ ಹಾಕಲಾದ ಒಡಂಬಡಿಕೆ ಪತ್ರ ಗ್ರಾಮೀಣ ಶಿಕ್ಷಣದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಎಚ್ಎಎಲ್ ಒದಗಿಸುವ ಹಣಕಾಸಿನ ನೆರವನ್ನು ಕಾರ್ಯರೂಪಕ್ಕೆ ತರಲಿದೆ.ಬುಡಕಟ್ಟು ಸಮುದಾಯಗಳ, ಅದರಲ್ಲೂ ಮಲೆ ಮಹದೇಶ್ವರ ಬೆಟ್ಟ ಪ್ರಾಂತ್ಯದ ಗುಡ್ಡಗಳಲ್ಲಿರುವ 18 ಹಳ್ಳಿಗಳ ಬೇಡಗಂಪಣ ಮತ್ತು ಸೋಲಿಗ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು, ಇದನ್ನು ಒದಗಿಸುವ ನಿಟ್ಟಿನಲ್ಲಿ ವಸತಿ ನಿಲಯ ನಿರ್ಮಾಣ ಕಾಮಗಾರಿ ತಕ್ಷಣವೇ ಆರಂಭಗೊಳ್ಳಲಿದೆ. ಈ ಭೂ ಪ್ರದೇಶ ಬಹಳ ಸವಾಲಿನದಾಗಿದ್ದು, ಸುದೀರ್ಘ ಅವಧಿಯಿಂದಲೂ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅಡಚಣೆಯಾಗಿ ಪರಿಣಮಿಸಿದೆ. ಆದರೆ, ನೂತನ ವಸತಿ ನಿಲಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.1964ರಲ್ಲಿ ಆರಂಭಗೊಂಡ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಈ ಪ್ರದೇಶದಲ್ಲಿ ಶಿಕ್ಷಣದ ಬೆಳಕನ್ನು ಪಸರಿಸುತ್ತಾ ಬಂದಿದೆ. 21 ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒದಗಿಸುತ್ತಿದ್ದು, ಅದರೊಡನೆ ಸಂಸ್ಕೃತ, ಯೋಗ, ಲಲಿತಕಲೆಗಳು, ಮತ್ತು ಸಾಂಸ್ಕೃತಿಕ ಅಧ್ಯಯನಗಳನ್ನು ಒದಗಿಸುತ್ತಿವೆ. ಈ ಮೂಲಕ ಮಠ ಸಂಪೂರ್ಣ ಶಿಕ್ಷಣದ ವಾತಾವರಣವನ್ನು ನಿರ್ಮಿಸಿದೆ. ಮಠ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳು, ಗೋಶಾಲೆಗಳನ್ನು ನಡೆಸುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ದಾಸೋಹ ನಡೆಸುತ್ತಿದೆ. ಪರಿಸರ ಜಾಗೃತಿ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ಜಾಗೃತಿಯ ಕುರಿತು ಮಠ ಒತ್ತು ನೀಡುತ್ತಿದ್ದು, ಇದು ಪಟ್ಟದ ಗುರುಸ್ವಾಮಿಯವರ ಮೌಲ್ಯಗಳಿಗೆ ಪೂರಕವಾಗಿದೆ.ಮಲೆ ಮಹದೇಶ್ವರ ಬೆಟ್ಟ ದೀರ್ಘ ಕಾಲದಿಂದಲೂ ಕನಿಷ್ಠ ರಸ್ತೆಗಳು, ವಿದ್ಯುತ್ ಮತ್ತು ಕುಡಿಯುವ ನೀರಿನ ಕೊರತೆಯಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸಿದ್ದು, ಇವು ಅಲ್ಲಿನ ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರ ಇರಿಸಿವೆ. ಇಂತಹ ಗ್ರಾಮಗಳಿಗೆ ಮಠದ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಮತ್ತು ಸಾಮಾಜಿಕ ಬೆಳವಣಿಗೆಯ ಆಧಾರವಾಗಿವೆ. ಹೊಸ ವಸತಿ ನಿಲಯಗಳನ್ನು ಒದಗಿಸಲು ಎಚ್ಎಎಲ್ ನೆರವಾಗುತ್ತಿರುವುದು ಲಿಂಗೈಕ್ಯ ಗುರುಗಳ ದೃಷ್ಟಿಕೋನಕ್ಕೆ ಪೂರಕವಾಗಿದೆ. ಈ ಯೋಜನೆ ಹೆಚ್ಚು ವಿದ್ಯಾರ್ಥಿಗಳು ದುರ್ಗಮ ರಸ್ತೆಯಲ್ಲಿ ನಡೆದು ಸಾಗುವ ಬದಲು, ವಿದ್ಯಾರ್ಥಿ ನಿಲಯದಲ್ಲಿ ಉಳಿದು, ಕಲಿಕೆಯತ್ತ ಹೆಚ್ಚಿನ ಗಮನ ಹರಿಸಲು ನೆರವಾಗಲಿದೆ ಎಚ್ಎಎಲ್ ಸಂಸ್ಥೆಯ ಉನ್ನತ ಅಧಿಕಾರಿಗಳಾದ ಡಾ. ಡಿ ಕೆ ಸುನಿಲ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಶ್ರೀ ರವಿ ಕೆ, ಶ್ರೀ ಬಿ ಸೇನಾಪತಿ , ಶ್ರೀ ಎಂಜಿ ಬಾಲಸುಬ್ರಹ್ಮಣ್ಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಾ ಶ್ರೀ ಶರತ್ ಚಂದ್ರ ಸ್ವಾಮಿಜಿ, ಮೈಸೂರು ವಿ.ವಿಯ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್.ಗುರು, ಶಿಕ್ಷಣ ಸಂಸ್ಥೆಯ ಸದಸ್ಯ ಪೊನ್ನಾಚಿ ಮಹದೇವಸ್ವಾಮಿ ಉಪಸ್ಥಿತರಿದ್ದರು.